ಶಿರಚ್ಛೇದ ಮಾಡಿ ಪಿಕಪ್ ಚಾಲಕನ ಹ*ತ್ಯೆ; ಬೆನ್ನಟ್ಟಿದ ಉದ್ರಿಕ್ತ ಗುಂಪಿನಿಂದ ಆರೋಪಿ ವ್ಯಾಪಾರಿಯ ಹ*ತ್ಯೆ

ಪಾಟ್ನಾ: ಸುಮಾರು 42 ವರ್ಷ ವಯಸ್ಸಿನ ಪಿಕಪ್ ವ್ಯಾನ್ ಚಾಲಕನನ್ನು ರಸ್ತೆಬದಿ ವ್ಯಾಪಾರಿಯೊಬ್ಬ ಶಿರಚ್ಛೇದನ ಮಾಡಿ ಹತ್ಯೆ ಮಾಡಿರುವ ಪ್ರಕರಣ ಗುರುವಾರ ನಡೆದಿದೆ. ಘಟನೆಯಿಂದ ಉದ್ರಿಕ್ತಗೊಂಡ ಸ್ಥಳೀಯರು ಆರೋಪಿ ವ್ಯಾಪಾರಿಯನ್ನು ಥಳಿಸಿ ಹತ್ಯೆ ಮಾಡಿದ್ದಾರೆ. ಇದರಿಂದ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಘಟನಾವಳಿಯಲ್ಲಿ ಎರಡು ಕೋಮುಗಳಿಗೆ ಸೇರಿದ ವ್ಯಕ್ತಿಗಳು ಮೃತರಾಗಿರುವುದು ಉದ್ವಿಗ್ನತೆಗೆ ಕಾರಣ.
ಗುರುವಾರ ಬೆಳಿಗ್ಗೆ ನಬಿ ಹುಸೇನ್ ಎಂಬ ಪಿಕಪ್ ಚಾಲಕ ಮತ್ತು ರವಿ ಚೌಹಾಣ್ (30) ಎಂಬ ರಸ್ತೆಬದಿ ವ್ಯಾಪಾರಿಯ ನಡುವೆ ಜಗಳವಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಹಿಟ್ಟು ಮಾರುತ್ತಿದ್ದ ರವಿ ಜಗಳದ ವೇಳೆ ಹುಸೇನ್ ಮೇಲೆ ಕತ್ತಿಯಿಂದ ಹೊಡೆದು ಶಿರಚ್ಛೇದ ಮಾಡಿದ್ದಾಗಿ ಘಟನೆ ನಡೆದ ಫೋರ್ಸ್ ಗಂಜಲ್ಲಿ ಠಿಕಾಣಿ ಹೂಡಿರುವ ಎಸ್ಪಿ ಜಿತೇಂದ್ರ ಕುಮಾರ್ ವಿವರಿಸಿದ್ದಾರೆ.

ಹುಸೇನ್ನ ಶಿರಚ್ಛೇದ ಮಾಡಿದ ರವಿ ರಸ್ತೆ ಮಧ್ಯದಲ್ಲೇ ಶವವನ್ನು ಬಿಟ್ಟು ಪರಾರಿಯಾಗಲು ಮುಂದಾದ ಘಟನೆಯ ಪ್ರತ್ಯಕ್ಷದರ್ಶಿಗಳು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಪೊಲೀಸರು ಆತನನ್ನು ರಕ್ಷಿಸುವ ವರೆಗೂ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ, ಗಾಯಗಳಿಂದ ಆತ ಮೃತಪಟ್ಟ ಎಂದು ಅವರು ಹೇಳಿದ್ದಾರೆ.
ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ. ಪಾರ್ಕಿಂಗ್ ವ್ಯಾಜ್ಯ ಸೇರಿದಂತೆ ಘಟನೆಗೆ ಕಾರಣವಾದ ವಿವಿಧ ಆಯಾಮಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್ ಡಿಪಿಓ ಮುಕೇಶ್ ಕುಮಾರ್ ಸಹಾ ವಿವರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಗಿದೆ. ಎರಡು ಭಿನ್ನ ಕೋಮುಗಳ ವ್ಯಕ್ತಿಗಳನ್ನು ಒಳಗೊಂಡಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.