Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಟೋ ಗ್ಯಾಸ್ ಕಂಟಕ; ಹೆಚ್ಚುವರಿ ಬಾಡಿಗೆಗೆ ಚಾಲಕರ ಮನವಿ, ಸಚಿವರ ವಿರುದ್ಧ ಆಕ್ರೋಶ!

Spread the love

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಆಟೋ ಗ್ಯಾಸ್‌ಗೆ ಅಭಾವ, ಗ್ಯಾಸ್‌ ಬಂಕ್‌ನವರಿಂದ ದುಬಾರಿ ದರ ವಸೂಲಿಯಿಂದಾಗಿ ಕೆಲ ಆಟೋ ಚಾಲಕರು ಶೇ.10 ರಷ್ಟು ಬಾಡಿಗೆ ಹಣವನ್ನು ಹೆಚ್ಚುವರಿಯಾಗಿ ನೀಡಿ ಎಂದು ಪ್ರಯಾಣಿಕರಲ್ಲಿ ಮನವಿ ಮಾಡುತ್ತಿದ್ದಾರೆ.

ಗಂಟೆಗಟ್ಟಲೆ ಕಾದರೂ ಆಟೋ ಗ್ಯಾಸ್‌ ಸಿಗುತ್ತಿಲ್ಲ. ಮತ್ತೊಂದೆಡೆ ಗ್ಯಾಸ್‌ ಬಂಕ್‌ನವರು ದುಬಾರಿ ದರಕ್ಕೆ ಗ್ಯಾಸ್‌ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಹೆಚ್ಚುವರಿಯಾಗಿ ಶೇ.10 ರಷ್ಟು ಬಾಡಿಗೆ ನೀಡಬೇಕು ಎಂದು ಬೆಂಗಳೂರು ಆಟೋ ಸೇನೆ ಹೆಸರಿನಲ್ಲಿ ಮೀಟರ್‌ ಬಳಿ ಬೋರ್ಡ್‌ಗಳನ್ನು ಹಾಕಿರುವುದು ಶುಕ್ರವಾರ ನಗರದಲ್ಲಿ ಕಂಡುಬಂತು.
ಇನ್ನು, ಗ್ಯಾಸ್‌ಗಾಗಿ ಆಟೋ ಚಾಲಕರ ಪರದಾಟ ಮುಂದುವರೆದಿದೆ. ಲಗ್ಗೆರೆ ಬಳಿಯ ಎಲ್‌ಪಿಜಿ ಬಂಕ್‌ನಲ್ಲಿ ಗ್ಯಾಸ್‌ಗಾಗಿ ಗುರುವಾರ ಸಂಜೆಯಿಂದಲೂ 800 ಕ್ಕೂ ಅಧಿಕ ಆಟೋಗಳನ್ನು ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಿಸಿದ್ದು ಶುಕ್ರವಾರ ಮಧ್ಯಾಹ್ನವಾದರೂ ಚಾಲಕರು ಕಾಯುತ್ತಿದ್ದುದು ಕಂಡುಬಂತು. ಬಹಳ ದೂರದಿಂದಲೂ ಗ್ಯಾಸ್‌ಗಾಗಿ ಚಾಲಕರು ಆಗಮಿಸಿದ್ದು ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರ ವಿರುದ್ಧ ವಿಡಿಯೋ ಮಾಡಿ ಆಕ್ರೋಶ:
ಬಿಳೇಕಳ್ಳಿಯ ವಿಜಯಾ ಬ್ಯಾಂಕ್‌ ಲೇಔಟ್‌ ಬಳಿ ಗ್ಯಾಸ್‌ಗಾಗಿ ಗುರುವಾರ ರಾತ್ರಿಯಿಂದಲೇ ಆಟೋಗಳನ್ನು ಕ್ಯೂನಲ್ಲಿ ನಿಲ್ಲಿಸಲಾಗಿತ್ತು. ನಂದಿನಿ ಲೇಔಟ್‌ನಲ್ಲೂ ಇದೇ ಪರಿಸ್ಥಿತಿ ಇದ್ದು ಶುಕ್ರವಾರ ಮುಂಜಾನೆಯಿಂದಲೂ ಚಾಲಕರು ಗ್ಯಾಸ್‌ಗೆ ಕಾಯುತ್ತಿದ್ದರು. ‘ಆಟೋ ಎಲ್‌ಪಿಜಿಗೆ ಅಭಾವವಿಲ್ಲ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿಕೆ ನೀಡಿರುವುದಕ್ಕೆ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಹೆಂಡತಿ-ಮಕ್ಕಳನ್ನು ಮನೆಯಲ್ಲಿ ಬಿಟ್ಟು ನಾವು ಬೆಳಗಿನ ಜಾವ ನಾಲ್ಕು ಗಂಟೆಗೇ ಆಗಮಿಸಿ ಗ್ಯಾಸ್‌ಗಾಗಿ ಕಾಯುತ್ತಿದ್ದೇವೆ’ ಎಂದು ವಿಡಿಯೋ ಮಾಡಿ ಚಾಲಕರು ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸೆಂಟ್‌ ಮಾರ್ಕ್ಸ್ ರಸ್ತೆಯಲ್ಲಿರುವ ಆಟೋ ಗ್ಯಾಸ್ ಸ್ಟೇಷನ್‌ ಬಳಿ ಗುರುವಾರ ರಾತ್ರಿಯಿಂದಲೇ ಚಾಲಕರು ಗ್ಯಾಸ್‌ಗಾಗಿ ಸುಮಾರು ಎರಡು ಕಿ.ಮೀ. ಸರದಿ ಸಾಲಿನಲ್ಲಿ ನಿಂತಿದ್ದರು. ಆಟೋಗಳಿಗೆ 200 ರು. ಹಾಗೂ ಕಾರುಗಳಿಗೆ 500 ರು. ಬೆಲೆಯ ಗ್ಯಾಸ್‌ ಅನ್ನು ಮಾತ್ರ ತುಂಬಿಸಲಾಯಿತು. ಗ್ಯಾಸ್‌ಗಾಗಿ ಆಟೋ ಚಾಲಕರು ಮುಗಿಬಿದ್ದಿದ್ದರಿಂದ ಇವರನ್ನು ನಿಯಂತ್ರಿಸಲು ಏಜೆನ್ಸಿಯವರು ಹರಸಾಹಸ ಪಡಬೇಕಾಯಿತು.
ಲೀಟರ್‌ಗೆ 135 ರು. ವಸೂಲಿ ?
ಆಟೋ ಗ್ಯಾಸ್‌ ಅಭಾವವನ್ನೇ ಬಂಡವಾಳ ಮಾಡಿಕೊಂಡ ಕೆಲ ಏಜೆನ್ಸಿಯವರು ಮನಸ್ಸಿಗೆ ಬಂದಂತೆ ದರ ವಸೂಲಿ ಮಾಡುತ್ತಿದ್ದಾರೆ. ವರ್ತೂರು ಕೋಡಿ ಬಳಿಯ ಎಲ್‌ಪಿಜಿ ಬಂಕ್‌ವೊಂದರಲ್ಲಿ ಲೀಟರ್‌ ಆಟೋ ಗ್ಯಾಸ್‌ಗೆ 135 ರು. ನಿಗದಿ ಮಾಡಿದ್ದು, ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೊಂದು ಹಣ ತೆಗೆದುಕೊಳ್ಳುತ್ತೀರಾ ಎಂದು ಬಂಕ್‌ನವರನ್ನು ಪ್ರಶ್ನಿಸಿದರೆ, ಬೇಕಾದರೆ ಹಾಕಿಸಿಕೊಳ್ಳಿ, ಇಲ್ಲದಿದ್ದರೆ ನಡಿಯಿರಿ ಎಂದು ದಬಾಯಿಸಿದ್ದಾರೆ. ಇದನ್ನು ಚಾಲಕರು ವಿಡಿಯೋ ಮಾಡಲು ಮುಂದಾದರೆ ಬಂಕ್‌ ಮುಚ್ಚಲು ಮುಂದಾದರು ಎಂದು ತಿಳಿದುಬಂದಿದೆ.
ಚುನಾವಣಾ ಪ್ರಚಾರಕ್ಕೆ ಆಕ್ರೋಶ
‘ನಮ್ಮ ಸಮಸ್ಯೆಗಿಂತ ಉಪ ಚುನಾವಣೆ ಪ್ರಚಾರವೇ ರಾಜಕಾರಣಿಗಳಿಗೆ ಮುಖ್ಯವಾಗಿದೆ. ಪ್ರಚಾರ ಮಾಡಲು ಬೆಂಗಳೂರಿನಿಂದ ದಾವಣಗೆರೆ ಮತ್ತು ಬಾಗಲಕೋಟೆಗೆ ತೆರಳುತ್ತಾರೆ. ಆದರೆ ಇಲ್ಲಿರುವ ಆಟೋದವರ ಸಮಸ್ಯೆ ಅವರಿಗೆ ಮುಖ್ಯವಾಗಿಲ್ಲ. ಮತ ಹಾಕಲು ಮಾತ್ರ ನಾವು ಬೇಕಾ’ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳವಾಗುತ್ತಿದ್ದಂತೆ ಹೋಟೆಲ್‌ನವರು ತಿನಿಸುಗಳಿಗೆ ಅಧಿಕ ದರ ನಿಗದಿ ಮಾಡುತ್ತಾರೆ. ಆದರೆ ನಾವು ಹೆಚ್ಚು ದರ ನಿಗದಿ ಮಾಡಿದರೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡುತ್ತಾರೆ. ಹೀಗಾದರೆ ನಾವು ಜೀವನ ನಿರ್ವಹಿಸುವುದು ಹೇಗೆ ಎಂದು ಆಟೋ ಚಾಲಕರು ಪ್ರಶ್ನಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *