ಟೆಕ್ ಲೋಕದಲ್ಲಿ ಒರಾಕಲ್ ಶಾಕ್: ಒಂದೇ ದಿನ 30 ಸಾವಿರ ಉದ್ಯೋಗಿಗಳ ವಜಾ!

ಹೊಸದಿಲ್ಲಿ: ವಾರಗಳ ಕಾಲ ನಡೆದ ಊಹಾಪೋಹಗಳಿಗೆ ತೆರೆ ಬಿದ್ದಂತೆ ತಂತ್ರಜ್ಞಾನ ದಿಗ್ಗಜ ಒರಾಕಲ್ ಸಂಸ್ಥೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವ್ಯಾಪಕ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವುದನ್ನು ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಬೆಳಿಗ್ಗೆ 5ರಿಂದ 6 ಗಂಟೆಯ ನಡುವೆ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬ ಮಾಹಿತಿ ಹೊರಬಂದಿದ್ದು, ಇದರಿಂದ ಉದ್ಯೋಗಿಗಳಲ್ಲಿ ಭಾರೀ ಆತಂಕ ಉಂಟಾಗಿದೆ.
ಭಾರತ ಮತ್ತು ಮೆಕ್ಸಿಕೊ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಒರಾಕಲ್ ನ ಕೌಡ್ ಹಾಗೂ ಡೇಟಾ ಸೇವೆಗಳ ವಿಭಾಗಗಳು ಈ ಕ್ರಮದಿಂದ ಹೆಚ್ಚು ಪ್ರಭಾವಿತವಾಗಿವೆ ಎಂದು ತಿಳಿದುಬಂದಿದೆ. ಸಂಸ್ಥೆ ಅಧಿಕೃತವಾಗಿ ವಜಾಗಳ ಪ್ರಮಾಣವನ್ನು ದೃಢಪಡಿಸದಿದ್ದರೂ, ಬೈಂಡ್, ರೆಡ್ಡಿಟ್ ಮತ್ತು ಎಕ್ಸ್ ಮೊದಲಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಾಹಿತಿಗಳು ವ್ಯಾಪಕ ವಜಾಗಳನ್ನು ಸೂಚಿಸುತ್ತಿವೆ.ವಜಾಗೊಳಿಸುವಿಕೆಯಿಂದ ಭಾರತವು ಅತ್ಯಂತ ಹೆಚ್ಚು ಪರಿಣಾಮಕ್ಕೊಳಗಾದ ದೇಶಗಳಲ್ಲಿ ಒಂದಾಗಿದೆ. ಆನ್ಲೈನ್ ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 12,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಜಾಗತಿಕವಾಗಿ ಈ ಸಂಖ್ಯೆ ಸುಮಾರು 30,000 ಎಂದು ಅಂದಾಜಿಸಲಾಗಿದ್ದು, ಇದು ಒರಾಕಲ್ ನ ಒಟ್ಟು ಉದ್ಯೋಗಿಗಳಲ್ಲಿ ಸುಮಾರು ಶೇ.18ರಷ್ಟಾಗಿದೆ ಎನ್ನಲಾಗಿದೆ. ಆದರೆ ಈ ಅಂಕಿಅಂಶಗಳನ್ನು ಕಂಪೆನಿ ಅಧಿಕೃತವಾಗಿ ದೃಢಪಡಿಸಿಲ್ಲ.
ಒಬ್ಬ ಎಕ್ಸ್ ಬಳಕೆದಾರ, “ಒರಾಕಲ್ ನಲ್ಲಿ ಹಿರಿಯ ವ್ಯವಸ್ಥಾಪಕರಾಗಿರುವ ಸ್ನೇಹಿತರಿಂದ ಕರೆ ಬಂದಿದೆ. 20 ಸದಸ್ಯರ ತಂಡದಲ್ಲಿ 6 ಜನರನ್ನು ಹೊರಹೋಗುವಂತೆ ಸೂಚಿಸಲಾಗಿದೆ. ಅನೇಕ ತಂಡಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ” ಎಂದು ಬರೆದಿದ್ದಾರೆ.ರೆಡ್ಡಿಟ್ ನಲ್ಲಿ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, “20 ವರ್ಷಗಳ ಸೇವೆಯ ಬಳಿಕ ಬೆಳಿಗ್ಗೆ 5 ಗಂಟೆಗೆ ವಜಾ ಇಮೇಲ್ ಬಂದಿದೆ” ಎಂದು ಒಬ್ಬರು ತಿಳಿಸಿದ್ದಾರೆ. ಇನ್ನೊಬ್ಬರು, “ಬೆಳಿಗ್ಗೆ 6 ಗಂಟೆಗೆ ಇಮೇಲ್ ಬಂದು, ನಾಲ್ಕು ವರ್ಷ ಪೂರ್ಣಗೊಳ್ಳುವ ಮುನ್ನವೇ ಕೆಲಸ ಕಳೆದುಕೊಂಡೆ” ಎಂದು ಹೇಳಿದ್ದಾರೆ.
ವಜಾಗಳಿಗೆ ಸಂಬಂಧಿಸಿದಂತೆ ಯಾವುದೇ ಮುಂಚಿತ ಎಚ್ಚರಿಕೆ ಅಥವಾ ಮಾನವ ಸಂಪನ್ಮೂಲ ವಿಭಾಗದ ಚರ್ಚೆಗಳು ನಡೆದಿಲ್ಲವೆಂದು ಹಲವರು ಆರೋಪಿಸಿದ್ದಾರೆ. “ಒರಾಕಲ್ ಲೀಡರ್ ಶಿಪ್” ನಿಂದ ನೇರವಾಗಿ ಇಮೇಲ್ ಗಳು ಬಂದಿದ್ದು, ಸಂದೇಶ ತಲುಪಿದ ತಕ್ಷಣವೇ ಆಂತರಿಕ ವ್ಯವಸ್ಥೆಗಳಿಗೆ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ ಎಂಬುದೂ ತಿಳಿದು ಬಂದಿದೆ.ಆಂತರಿಕ ಸಂವಹನದಲ್ಲಿ ಸಂಸ್ಥೆ “ಸಂಸ್ಥೆಯ ಬದಲಾವಣೆಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪರಿಣಾಮವಾಗಿ ನಿಮ್ಮ ಹುದ್ದೆ ಅನಗತ್ಯವಾಗುತ್ತದೆ” ಎಂದು ತಿಳಿಸಿದೆ.
ವಜಾಗೊಂಡವರಿಗೆ ಪರಿಹಾರ ಪ್ಯಾಕೇಜ್ ನೀಡಲಾಗಿದ್ದು, ಪ್ರತಿ ವರ್ಷದ ಸೇವೆಗೆ 15 ದಿನಗಳ ಸಂಬಳ, ಒಂದು ತಿಂಗಳ ನೋಟಿಸ್ ವೇತನ, ರಜೆ ನಗದು, ಅರ್ಹತೆಯ ಆಧಾರದ ಮೇಲೆ ಗ್ರಾಚ್ಯುಟಿ ಹಾಗೂ ಎರಡು ತಿಂಗಳ ಹೆಚ್ಚುವರಿ ಸಂಬಳ ಒಳಗೊಂಡಿದೆ ಎಂದು ವರದಿಯಾಗಿದೆ. ಆದರೆ ಸ್ವಯಂಪ್ರೇರಿತ ರಾಜೀನಾಮೆ ನೀಡುವವರಿಗೆ ಮಾತ್ರ ಈ ಪ್ಯಾಕೇಜ್ ಅನ್ವಯಿಸುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.ಮತ್ತೊಂದು ತಿಂಗಳೊಳಗೆ ಇನ್ನೊಂದು ಸುತ್ತಿನ ವಜಾಗೊಳಿಸುವಿಕೆ ನಡೆಯಬಹುದು ಎಂಬ ಸುಳಿವುಗಳಿದ್ದರೂ, ಇದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ.
ಕೃತಕ ಬುದ್ಧಿಮತ್ತೆ ಮೂಲಸೌಕರ್ಯ ಹಾಗೂ ಡೇಟಾ ಕೇಂದ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಂಪನ್ಮೂಲಗಳ ಮರುಹಂಚಿಕೆ ನಡೆಯುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಟೆಕ್ ಕ್ಷೇತ್ರದಲ್ಲಿ ವೆಚ್ಚ ಕಡಿತ ಕ್ರಮಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮೆಝಾನ್ ಸೇರಿದಂತೆ ಹಲವಾರು ಕಂಪೆನಿಗಳು ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಸಂಸ್ಥೆಯ ಮಾಜಿ ಉದ್ಯೋಗಿ ಮೇರುಗು ಶ್ರೀಧರ್, ಕೆಲಸದ ಹೆಚ್ಚು ಸಮಯಕ್ಕೆ ವಿರೋಧ ವ್ಯಕ್ತಪಡಿಸಿದ ಬಳಿಕ ತಮ್ಮನ್ನು ಮುಂಚಿತವಾಗಿ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಮೇಲೆ ಸ್ಥಳೀಯ ಕಾನೂನುಗಳ ಕಾರಣದಿಂದ ಹೆಚ್ಚು ಹೊಡೆತ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
ಒರಾಕಲ್ ಸಂಸ್ಥೆ ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಹಠಾತ್ ನಡೆದ ಭಾರಿ ವಜಾಗಳಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಉದ್ಯೋಗಿಗಳಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.
