ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ಇರಾನ್ ದಾಳಿ; 12 ಅಮೆರಿಕನ್ ಸೈನಿಕರಿಗೆ ಗಾಯ

ರಿಯಾದ್: ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಅಮೆರಿಕದ 12 ಸೈನಿಕರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ವಿರುದ್ಧ ನಾಲ್ಕು ವಾರಗಳ ಹಿಂದೆ ಆರಂಭವಾದ ಯುದ್ಧದ ನಂತರ ಇದುವರೆಗೂ 300ಕ್ಕೂ ಹೆಚ್ಚು ಅಮೆರಿಕದ ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯು ತಿಳಿಸಿದೆ.
ಶುಕ್ರವಾರ ಅಮೆರಿಕದ ಸೈನ್ಯ ನೀಡಿದ ಮಾಹಿತಿಯ ಪ್ರಕಾರ, ಗಾಯಗೊಂಡ 300 ಸೈನಿಕರಲ್ಲಿ 273 ಮಂದಿ ಮತ್ತೆ ಕರ್ತವ್ಯಕ್ಕೆ ಹಿಂತಿರುಗಿದ್ದಾರೆ. ಉಳಿದವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಲಾಗಿದೆ.
ಇದುವರೆಗೆ ನಡೆದಿರುವ ಈ ಸಂಘರ್ಷದಲ್ಲಿ ಅಮೆರಿಕದ ಒಟ್ಟು 13 ಸೈನಿಕರು ಮೃತಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿಯು ಉಲ್ಲೇಖಿಸಿದೆ.
