ಸಿಕ್ಕಿಂ ಭೂಕುಸಿತ: ಚುಂಗ್ಲಾಂಗ್‌ನಲ್ಲಿ 200ಕ್ಕೂ ಹೆಚ್ಚು ಪ್ರವಾಸಿಗರು ಅತಂತ್ರ; ರಸ್ತೆ ಸಂಪರ್ಕ ಕಡಿತ

ಗ್ಯಾಂಗ್ಲಾಕ್: ಉತ್ತರ ಸಿಕ್ಕಿಂನ ಚುಂಗ್ಲಾಂಗ್‌ನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಚುಂಗ್ಲಾಂಗ್-ಲಾಚೆನ್ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಲಾಚೆನ್‌ಗೆ ತೆರಳುತ್ತಿದ್ದ ಪ್ರವಾಸಿಗರು ದಾರಿ ಮಧ್ಯದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಂಗನ್ ಜಿಲ್ಲೆಯ ಜಿಲ್ಲಾಧಿಕಾರಿ ಅನಂತ್ ಜೈನ್ ಹೇಳಿದ್ದಾರೆ.
ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾರ್ಗಗಳನ್ನು ಸುರಕ್ಷಿತವೆಂದು ಘೋಷಿಸಿದ ನಂತರ ಪ್ರಯಾಣಕ್ಕೆ ಅವಕಾಶ ನೀಡಬಹುದು. ಮಾರ್ಗಮಧ್ಯೆ ಸಿಲುಕಿಕೊಂಡ ಪ್ರವಾಸಿಗರಿಗೆ ಚುಂಗ್ಲಾಂಗ್‌ನ ಐಟಿಬಿಪಿ ಶಿಬಿರದಲ್ಲಿ ಮತ್ತು ಗುರುದ್ವಾರದಲ್ಲಿ ರಾತ್ರಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
