4 ರಿಂದ 6 ವಾರಗಳಲ್ಲಿ ಯುದ್ಧ ಅಂತ್ಯಗೊಳ್ಳಬಹುದು: ಇರಾನ್ ಸಂಘರ್ಷದ ಬಗ್ಗೆ ಡೊನಾಲ್ಡ್ ಟ್ರಂಪ್ ಭವಿಷ್ಯ

ಹೊಸದಿಲ್ಲಿ: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವು ನಾಲ್ಕರಿಂದ ಆರು ವಾರಗಳಲ್ಲಿ ಕೊನೆಯಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಇರಾನ್ ಭೂಪ್ರದೇಶದಲ್ಲಿ ಭೂಸೇನೆ ನಿಯೋಜನೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಫೆಬ್ರವರಿ 28ರಂದು ಆರಂಭವಾದ ಈ ಯುದ್ಧ ಎಷ್ಟು ಸಮಯ ಮುಂದುವರಿಯಲಿದೆ? ಯಾವ ರೀತಿಯ ಕಾರ್ಯಾಚರಣೆಗಳು ನಡೆಯಲಿವೆ? ಅಮೆರಿಕ ಜಯ ಎಂದು ಘೋಷಿಸಲು ಬಳಸುವ ಮಾನದಂಡ ಏನು ಎಂಬುದರ ಬಗ್ಗೆ ಅಮೆರಿಕ ಇನ್ನೂ ಸ್ಪಷ್ಟವಾದ ಮಾಹಿತಿ ನೀಡಿಲ್ಲ.
“ಆಪರೇಶನ್ ಎಪಿಕ್ ಪ್ಯೂರಿ” (Operation Epic Fury) ಯಾವಾಗ ಮುಗಿಯಬಹುದು ಎಂದು ಪ್ರಶ್ನಿಸಿದಾಗ ಟ್ರಂಪ್ ಆಡಳಿತವು ನಾಲ್ಕರಿಂದ ಆರು ವಾರಗಳ ಅವಧಿಯನ್ನು ಸೂಚಿಸಿದೆ.
ಶುಕ್ರವಾರ ಗ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಇರಾನ್ ನ ಸೈನಿಕ ಸಾಮರ್ಥ್ಯವನ್ನು ದುರ್ಬಲಗೊಳಿಸುವಲ್ಲಿ ಹಾಗೂ ಅದರ ಅಣ್ವಸ್ತ್ರ ಉತ್ಪಾದನಾ ಸಾಮರ್ಥ್ಯಕ್ಕೆ ಹಾನಿ ಮಾಡುವಲ್ಲಿ ಅಮೆರಿಕ ಮಹತ್ವದ ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ.
ಆದರೆ, ಇರಾನ್ ಭೂಭಾಗದಲ್ಲಿ ಭೂಸೇನೆ ನಿಯೋಜನೆ ಮಾಡಲು ಸಿದ್ಧವಾಗಿದೆಯೇ ಎಂಬ ಪ್ರಮುಖ ಪ್ರಶ್ನೆಗೆ ಟ್ರಂಪ್ ಉತ್ತರವನ್ನು ನೀಡಿಲ್ಲ.
