ಗಾಝಾ ಪರ ಪ್ರತಿಭಟನೆ: ಸಿಡ್ನಿ ಮಸೀದಿಯಿಂದ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೊರಕ್ಕೆ

ಸಿಡ್ನಿ: ಗಾಝಾ ಸಂಘರ್ಷದ ಕುರಿತು ಆಸ್ಟ್ರೇಲಿಯಾ ಸರ್ಕಾರದ ನಿಲುವಿಗೆ ವಿರೋಧವಾಗಿ ಸಿಡ್ನಿಯ ಲಕೆಂಬಾ ಮಸೀದಿಯಲ್ಲಿ ಶುಕ್ರವಾರ ನಡೆದ ಈದ್ ಉಲ್-ಫಿತರ್ ಪ್ರಾರ್ಥನಾ ವೇಳೆ ಪ್ರತಿಭಟನೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಆಂಥೋನಿ ಅಲ್ಟನೀಸ್ ಅವರನ್ನು ಭದ್ರತಾ ಸಿಬ್ಬಂದಿ ತುರ್ತಾಗಿ ಸ್ಥಳದಿಂದ ಹೊರಗೆ ಕರೆದೊಯ್ದರು.
ಪ್ರಾರ್ಥನೆಯ ಆರಂಭದಲ್ಲಿ ಶಾಂತವಾಗಿದ್ದ ಕಾರ್ಯಕ್ರಮವು ಸುಮಾರು 15 ನಿಮಿಷಗಳ ನಂತರ ತೀವ್ರ ಪ್ರತಿಭಟನೆಯತ್ತ ತಿರುಗಿತು. ಸಾವಿರಾರು ಜನರು ಸೇರಿದ್ದ ಸಭೆಯಲ್ಲಿ ಕೆಲವರು “ನಾಚಿಕೆಯಿಲ್ಲವೇ!”, “ಹೊರಹೋಗಿ!” ಎಂದು ಘೋಷಣೆ ಕೂಗುತ್ತಾ ಸರ್ಕಾರದ ಗಾಝಾ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಸ್ರೇಲ್ ನ ಮಿಲಿಟರಿ ಕಾರ್ಯಾಚರಣೆಗೆ ಬೆಂಬಲ ನೀಡಲಾಗಿದೆ ಎಂಬ ಆರೋಪದ ನಡುವೆಯೇ, ಕೆಲ ಪ್ರತಿಭಟನಾಕಾರರು ಅಲ್ಪನೀಸ್ ಹಾಗೂ ಗೃಹ ವ್ಯವಹಾರಗಳ ಸಚಿವ ಟೋನಿ ಬರ್ಕ್ ಅವರನ್ನು “ನರಮೇಧವನ್ನು ಬೆಂಬಲಿಸುವವರು” ಎಂದು ಟೀಕಿಸಿದರು.

ಮಧ್ಯಪ್ರಾಚ್ಯದ ಪರಿಸ್ಥಿತಿ ಕುರಿತು ಮಸೀದಿಯ ಪ್ರತಿನಿಧಿಯೊಬ್ಬರು ಹೇಳಿಕೆ ಓದಲು ಮುಂದಾದಾಗ ಪ್ರತಿಭಟನಾಕಾರರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಪರಿಸ್ಥಿತಿ ನಿಯಂತ್ರಣ ತಪ್ಪುವ ಲಕ್ಷಣ ಕಾಣುತ್ತಿದ್ದಂತೆ, ಮಸೀದಿ ಆಡಳಿತವು ಜನರನ್ನು ಶಾಂತಗೊಳಿಸಲು ಮನವಿ ಮಾಡಿತು. “ಇದು ಈದ್, ಸಂತೋಷದ ದಿನ,” ಎಂದು ಮನವಿ ಮಾಡಿದರೂ ಉದ್ವಿಗ್ನತೆ ತಗ್ಗಲಿಲ್ಲ.
ಸುಮಾರು 30,000 ಮಂದಿ ಸೇರಿದ್ದ ಗುಂಪಿನಲ್ಲಿ ಗೊಂದಲ ಉಂಟಾದ ಹಿನ್ನೆಲೆ, 33 ವರ್ಷದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ತೆರಳುವಂತೆ ಸೂಚಿಸಿದರು. ಇದೇ ವೇಳೆ, ಮಸೀದಿಯ ಮೆಟ್ಟಿಲುಗಳ ಬಳಿ ಕೂಡಿದ್ದ ಜನರನ್ನು ತಪ್ಪಿಸಲು ಪ್ರಧಾನಿಯವರನ್ನು ಪಕ್ಕದ ದ್ವಾರದಿಂದ ಭದ್ರತೆಯೊಂದಿಗೆ ಹೊರಗೆ ಕರೆದೊಯ್ಯಲಾಯಿತು.
ಘಟನೆಯ ನಂತರ ಮಾತನಾಡಿದ ಅಲ್ಟನೀಸ್, “ಬಹುತೇಕ ಜನರು ನಮಗೆ ಉತ್ತಮ ಸ್ವಾಗತ ನೀಡಿದರು. ಕೆಲವರು ಮಾತ್ರ ಅಶಾಂತಿ ಸೃಷ್ಟಿಸಿದರು,” ಎಂದು ಹೇಳಿದರು. ಪ್ರತಿಭಟನೆ ಮಾಡಿದ ಕೆಲವರು ಕೆಲ ಗುಂಪುಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಅವರು ಆರೋಪಿಸಿದರು. ಹಿಜ್ ಉಟ್-ತಹೀರ್ ಸಂಘಟನೆಯನ್ನು ಇತ್ತೀಚೆಗೆ ನಿಷೇಧಿಸಿರುವುದನ್ನೂ ಅವರು ಉಲ್ಲೇಖಿಸಿದರು.
ಈ ನಡುವೆ, ಲೆಬನಾನಿನ ಮುಸ್ಲಿಂ ಅಸೋಸಿಯೇಷನ್ (LMA) ಘಟನೆಗೆ ಕ್ಷಮೆಯಾಚಿಸಲು ನಿರಾಕರಿಸಿದೆ. ಗಾಝಾ ಮತ್ತು ಲೆಬನಾನ್ ಪರಿಸ್ಥಿತಿಯ ಬಗ್ಗೆ ಸಮುದಾಯದ ಕಳವಳವನ್ನು ಪ್ರಧಾನಿಯವರು ನೇರವಾಗಿ ಕೇಳಲೆಂದು ಅವರನ್ನು ಆಹ್ವಾನಿಸಿದ್ದೇವೆ ಎಂದು ಸಂಘಟನೆ ತಿಳಿಸಿದೆ.
ಈ ಘಟನೆಗೆ ಮುನ್ನವೇ ಉದ್ವಿಗ್ನತೆ ಹೆಚ್ಚಾಗಿತ್ತು. ಬೋಂಡಿ ಬೀಚ್ ದಾಳಿಯ ಬಳಿಕ ಇಸ್ರೇಲಿನ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಆಸ್ಟ್ರೇಲಿಯಾಕ್ಕೆ ಆಹ್ವಾನಿಸಿದ್ದಕ್ಕೆ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ಸಿಡ್ನಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ 27 ಮಂದಿಯನ್ನು ಬಂಧಿಸಲಾಗಿತ್ತು.