“ಶಾಲೆಯಲ್ಲೂ ಇಷ್ಟು ಪರ್ಸೆಂಟ್ ಬಂದಿರಲಿಲ್ಲ: ಗೆಲುವಿನ ದಾಖಲೆಯ ಬಗ್ಗೆ ಸೂರ್ಯಕುಮಾರ್ ಯಾದವ್ ಹಾಸ್ಯ ಚಟಾಕಿ”

ಹೊಸದಿಲ್ಲಿ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊನೆಗೂ ಶೇಕಡಾ 80ರಷ್ಟು ಗೆಲುವಿನ ದಾಖಲೆ ಸಾಧಿಸಿರುವ ಖುಷಿಯಲ್ಲಿದ್ದಾರೆ.
ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತ ತಂಡವನ್ನು ಚುಟುಕು ಕ್ರಿಕೆಟ್ನಲ್ಲಿ ಮುನ್ನಡೆಸಿದ ಎಸ್ಕೆವೈ ಅವರ ಗೆಲುವಿನ ಪ್ರಮಾಣ ಶೇಕಡಾ 80ರಷ್ಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಪಡೆಯಲು ಸಾಧ್ಯವಾಗದ ಅಂಕವನ್ನು ಕ್ರಿಕೆಟ್ನಲ್ಲಿ ಪಡೆಯಲು ಸಾಧ್ಯವಾದ ಬಗ್ಗೆ ಅವರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.”ಶಾಲೆ ಮತ್ತು ಕಾಲೇಜಿನಲ್ಲಿ ಓದಿನ ಮೂಲಕ ನಾನು ಸಾಧಿಸಲು ಬಯಸಿದ್ದ ಶೇಕಡಾವಾರು ಅಂಕವನ್ನು ಇಂದು ಕ್ರಿಕೆಟ್ನಲ್ಲಿ ಪಡೆಯುತ್ತಿದ್ದೇನೆ,’ ಎಂದು 2024ರಿಂದ ಚುಟುಕು ಕ್ರಿಕೆಟ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಎಸ್ವೈ ತಿಳಿಸಿದ್ದಾರೆ.

ಎಸ್ಕೆವೈ ನೇತೃತ್ವದಲ್ಲಿ ಭಾರತ ಟಿ20 ತಂಡ 52 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 42 ಪಂದ್ಯಗಳನ್ನು ಗೆದ್ದಿದೆ.”ಅಲ್ಲಿ (ಶಾಲೆ, ಕಾಲೇಜಿನಲ್ಲಿ) ನಾನು ಎಂದೂ ಶೇಕಡಾ 50-60ರ ಗಡಿ ದಾಟಿಲ್ಲ. ಆದರೆ ಖಂಡಿತವಾಗಿಯೂ ಶೇಕಡಾ 80ರ ಗೆಲುವು ಖುಷಿ ನೀಡುವಂಥದ್ದು. ಅಂಕಿ ಅಂಶಗಳಿಗೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲವಾದರೂ, ಯಾವುದೇ ಪಂದ್ಯವನ್ನು ಸೋಲಲು ಯಾರೂ ಬಯಸುವುದಿಲ್ಲ.
ಎಲ್ಲ ಪಂದ್ಯಗಳನ್ನು ಗೆಲ್ಲುವುದು ನನಗೆ ಹೆಚ್ಚು ಸಂತೋಷ ನೀಡುತ್ತದೆ,” ಎಂದು ಹೇಳಿದ್ದಾರೆ.ಮುಂಬೈ ಮೂಲದ ಎಸ್ವೈ ಅವರ ತಂದೆ ಅಶೋಕ್ ಕುಮಾರ್ ಯಾದವ್ ಭಾಭಾ ಅಟೊಮಿಕ್ ರಿಸರ್ಚ್ ಸೆಂಟರ್ನಲ್ಲಿ ಎಲೆಕ್ನಿಕಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಸೂರ್ಯಕುಮಾರ್ ಅವರಿಗೆ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಅವರ ಕುಟುಂಬವೂ ಕ್ರಿಕೆಟ್ ಮಹತ್ವಾಕಾಂಕ್ಷೆಗೆ ಸದಾ ಬೆಂಬಲ ನೀಡಿದೆ.