ಮಂಗಳೂರು-ಶಾರ್ಜಾ ವಿಮಾನಯಾನ ಪುನಾರಂಭ: ಮಾರ್ಚ್ 16ರಿಂದ ಹಾರಾಟ ಶುರು

ಮಂಗಳೂರು: ಗಲ್ ಗಲ್ಫ್ ಯುದ್ಧ ಭೀತಿಯಿಂದ ಸ್ಥಗಿತಗೊಂಡಿದ್ದ ವಿಮಾನ ಯಾನದ ಪೈಕಿ ಏರ್ ಇಂಡಿಯಾ ಮಂಗಳೂರು-ಶಾರ್ಜಾ ಮಧ್ಯೆ ಮಾ.16ರಿಂದ 28ರವರೆಗೆ ಪ್ರತಿದಿನ ವಿಮಾನ ಸಂಚಾರ ಆರಂಭಿಸಲಿದೆ.
ಏರ್ ಇಂಡಿಯಾ 6057 ಮಂಗಳೂರಿನಿಂದ ಮಧ್ಯಾಹ್ನ 1:25ಕ್ಕೆ ಹೊರಟು ಶಾರ್ಜಾವನ್ನು ಅಲ್ಲಿನ ಸಮಯ ಸಂಜೆ 4:05ಕ್ಕೆ ತಲುಪಲಿದೆ. ಏರ್ ಇಂಡಿಯಾ 6058 ಶಾರ್ಜಾದಿಂದ ಅಲ್ಲಿನ ಸಮಯ ಸಂಜೆ 5:05 ಕ್ಕೆ ಹೊರಟು ರಾತ್ರಿ 10.30ಕ್ಕೆ ಮಂಗಳೂರು ತಲುಪಲಿದೆ.
ಮಂಗಳೂರಿನಿಂದ ದುಬೈಗೆ ವಾರದಲ್ಲಿ 17, ಅಬುಧಾಬಿಗೆ 14, ದೋಹಾಕ್ಕೆ 3, ಜೆದ್ದಾಕ್ಕೆ 3, ಮಸ್ಕತ್‌ಗೆ 2, ಬಹರೈನ್‌ಗೆ 4, ಕುವೈತ್‌ಗೆ 3, ದಮ್ಮಾಮ್‌ಗೆ 6 ವಿಮಾನಗಳು ಸಂಚರಿಸುತ್ತವೆ. ಆದರೆ ಗಲ್ಫ್ ಯುದ್ಧ ಭೀತಿಯಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಬಹುತೇಕ ಎಲ್ಲ ವಿಮಾನಗಳ ಸಂಚಾರ ರದ್ದಾಗಿದೆ.

*ಮಂಗಳೂರು-ಹೊಸದಿಲ್ಲಿ ವಿಮಾನ
ಮಂಗಳೂರು ಮತ್ತು ಹೊಸದಿಲ್ಲಿ ಮಧ್ಯೆ ಮಾ.16ರಿಂದ 25ರವರೆಗೆ ಸೋಮವಾರ, ಬುಧವಾರ, ರವಿವಾರ ವಿಮಾನ ಸಂಚರಿಸಲಿದೆ. ಐಎಕ್ಸ್ 1992 ಮಂಗಳೂರಿನಿಂದ ಬೆಳಗ್ಗೆ 9:30ಕ್ಕೆ ಹೊರಟು ಮಧ್ಯಾಹ್ನ 12:25ಕ್ಕೆ ಹೊಸದಿಲ್ಲಿ ತಲುಪಲಿದೆ. ಐಎಕ್ಸ್ 1991 ಹೊಸದಿಲ್ಲಿಯಿಂದ ಬೆಳಗ್ಗೆ 5:15ಕ್ಕೆ ಹೊರಟು ಮಂಗಳೂರನ್ನು ಬೆಳಗ್ಗೆ 8:30ಕ್ಕೆ ತಲುಪಲಿದೆ. ವಾರದ ಇತರ ದಿನಗಳಲ್ಲಿ ಐಎಕ್ಸ್ 1276 ಮಂಗಳೂರಿನಿಂದ ಬೆಳಗ್ಗೆ 08:30ಕ್ಕೆ ಹೊರಟು ಮಧ್ಯಾಹ್ನ 11:45ಕ್ಕೆ ಹೊಸದಿಲ್ಲಿ ತಲುಪಲಿದೆ. ಐಎಕ್ಸ್ 1275 ಹೊಸದಿಲ್ಲಿಯಿಂದ ಬೆಳಗ್ಗೆ 5ಕ್ಕೆ ಹೊರಟು ಬೆಳಗ್ಗೆ 8ಕ್ಕೆ ಮಂಗಳೂರು ತಲುಪಲಿದೆ ಎಂದು ಪ್ರಕಟನೆ ತಿಳಿಸಿದೆ.