ಭೀಕರ ಯುದ್ಧದ ಮುನ್ಸೂಚನೆ: ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಭಾರಿ ಬಾಂಬ್ ದಾಳಿ

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ಉಲ್ಬಣಗೊಳ್ಳುತ್ತಿರುವ ನಡುವೆಯೇ ಮತ್ತು ಇಂಧನ ಹರಿವಿನ ಮೇಲಿನ ನಿರ್ಬಂಧಗಳು ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿರುವ ಸಂದರ್ಭದಲ್ಲಿ ಹಾರ್ಮುಝ್ ಜಲಸಂಧಿಯ ಸಮೀಪವಿರುವ ಇರಾನ್ ನ ಖಾರ್ಗ್ ದ್ವೀಪದಲ್ಲಿನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ಸೇನೆ ಭಾರಿ ಬಾಂಬ್ ದಾಳಿ ನಡೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಈ ಕುರಿತು ಟೂತ್ ಸೋಶಿಯಲ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಟ್ರಂಪ್, “ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಗಳಲ್ಲಿ ಒಂದನ್ನು ಕಾರ್ಯಗತಗೊಳಿಸಿದೆ. ಇರಾನ್ ನ ‘ಕಿರೀಟ ರತ್ನ’ವೆಂದು ಪರಿಗಣಿಸಲ್ಪಡುವ ಖಾರ್ಗ್ ದ್ವೀಪದಲ್ಲಿನ ಪ್ರತಿಯೊಂದು ಮಿಲಿಟರಿ ನೆಲೆಗಳನ್ನು ಸಂಪೂರ್ಣವಾಗಿ ನಾಶಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಯುದ್ಧ ತೀವ್ರಗೊಳ್ಳುತ್ತಿರುವುದು ಹಾಗೂ ಇಂಧನ ಸರಬರಾಜಿನ ಮೇಲಿನ ನಿರ್ಬಂಧಗಳಿಂದ ಜಾಗತಿಕ ಆರ್ಥಿಕ ಪರಿಸ್ಥಿತಿಗೆ ಗಂಭೀರ ಪರಿಣಾಮ ಉಂಟಾಗುತ್ತಿರುವ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ಟ್ರಂಪ್ ಹೇಳಿದ್ದಾರೆ.
ಆದರೆ ಈ ದ್ವೀಪದಲ್ಲಿರುವ ಇರಾನ್ ತೈಲ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರದೇಶದಲ್ಲಿ ಈಗಾಗಲೇ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಸಾಧ್ಯತೆ ಇದೆ.
