ಬಸ್ ಮತ್ತು ವ್ಯಾನ್ ನಡುವೆ ಸಂಭವಿಸಿದ ಭೀಕರ ಢಿಕ್ಕಿ: ಇಬ್ಬರು ದಂಪತಿಗಳು ಸೇರಿದಂತೆ ಆರು ಮಂದಿ ದುರ್ಮರಣ; ಏಳು ಜನರಿಗೆ ಗಾಯ

ಆಗ್ರಾ: ಹೋಳಿ ಹಬ್ಬಕ್ಕಾಗಿ ಮನೆಗೆ ಬರುತ್ತಿದ್ದ ವ್ಯಾನ್ ಗೆ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಎರಡು ದಂಪತಿಗಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ದಿನೇಶ್ ಸಿಂಗ್ (45), ಪತ್ನಿ ಸುನೀತಾ ದೇವಿ (40), ಲೋಕೇಶ್ (30), ವಿಜಯ್ ಬಫೇಲ್ (30) ಅವರ ಪತ್ನಿ ಪಿಂಕಿ ಬಫೇಲ್ (28) ಸಂಬಂಧಿ ನಾತುದೇವಿ (35) ಎಂದು ಗುರುತಿಸಲಾಗಿದೆ.
ಮಂಗಳವಾರ ಮುಂಜಾನೆ ಯಮುನಾ ಎಕ್ಸ್ಪ್ರೆಸ್ ಹೈವೇಯಲ್ಲಿ ಹತ್ರಾಸ್ ಬಳಿ 13 ಪ್ರಯಾಣಿಕರನ್ನು ಹೊಂದಿದ್ದ ವ್ಯಾನ್ ಗೆ ವೇಗವಾಗಿ ಬಂದ ಸ್ವೀಪರ್ ಬಸ್ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಸಂತ್ರಸ್ತ ಪ್ರಯಾಣಿಕರು ರಾಜಸ್ಥಾನದ ಧೋಲ್ಪುರ ಜಿಲ್ಲೆಯಿಂದ ಹೋಳಿ ಹಬ್ಬದ ಸಂಭ್ರಮಕ್ಕಾಗಿ ದೆಹಲಿಗೆ ಆಗಮಿಸುತ್ತಿದ್ದರು.
ಮುಂಜಾನೆ 4.15ರ ಸುಮಾರಿಗೆ 141ನೇ ಮೈಲುಗಲ್ಲು ಬಳಿ ಈ ದುರಂತ ಸಂಭವಿಸಿದೆ. ವ್ಯಾನ್ ಒಂದನ್ನು ಹಿಂದಿಕ್ಕುವ ರಭಸದಲ್ಲಿ ಮುನ್ನುಗ್ಗಿದ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ವ್ಯಾನ್ ನಲ್ಲಿದ್ದ ಗಾಯಾಳುಗಳನ್ನು ಖಂದೌಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಆಗ್ರಾಗೆ ಕರೆದೊಯ್ಯಲಾಗಿದೆ.
