ಇಸ್ರೇಲ್ ಪ್ರಧಾನಿಗೆ ಮೋದಿ ಕರೆ; ಯುದ್ಧ ನಿಲ್ಲಿಸುವಂತೆ ಭಾರತದಿಂದ ಬಲವಾದ ಒತ್ತಾಯ

ಹೊಸದಿಲ್ಲಿ : ಪ್ರಾದೇಶಿಕ ಉದ್ವಿಗ್ನ ಪರಿಸ್ಥಿತಿಯ ನಡುವೆ ಪ್ರಧಾನಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಕಳವಳವನ್ನು ಅವರು ವ್ಯಕ್ತಪಡಿಸಿದ್ದು, ನಾಗರಿಕರ ಸುರಕ್ಷತೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಬೇಕೆಂದು ಸ್ಪಷ್ಟಪಡಿಸಿದ್ದಾರೆ. ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಧಕ್ಕೆಯಾಗುವ ಯಾವುದೇ ಕ್ರಮಗಳು ಆತಂಕಕಾರಿ ಎಂಬುದನ್ನೂ ತಿಳಿಸಿದ್ದಾರೆ.

ಹಿಂಸಾಚಾರ ಮತ್ತು ಯುದ್ಧ ಪರಿಸ್ಥಿತಿಯಿಂದ ಸಾಮಾನ್ಯ ಜನತೆ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಉದ್ವಿಗ್ನತೆಯನ್ನು ಶಮನಗೊಳಿಸುವ ದಿಕ್ಕಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯುದ್ಧವನ್ನು ಬೇಗನೆ ನಿಲ್ಲಿಸುವ ಅಗತ್ಯವಿದೆ ಎಂಬ ನಿಲುವನ್ನು ಭಾರತ ಪುನರುಚ್ಚರಿಸಿದೆ. ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.