ದೆಹಲಿ: ಪೊಲೀಸರೊಂದಿಗೆ ಘರ್ಷಣೆ; ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸೇರಿ 14 ಮಂದಿ ಬಂಧನ

ಹೊಸದಿಲ್ಲಿ: ಶಿಕ್ಷಣ ಸಚಿವಾಲಯದ ಕಡೆಗೆ ಹೊರಟಿದ್ದ ವಿದ್ಯಾರ್ಥಿಗಳ ಮೆರವಣಿಗೆಯನ್ನು ತಡೆದ ಕೆಲವೇ ಗಂಟೆಗಳಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) 14 ಮಂದಿ ವಿದ್ಯಾರ್ಥಿಗಳನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್, ಹಾಲಿ ಅಧ್ಯಕ್ಷೆ ಅದಿತಿ ಮಿಶ್ರಾ, ದಾನಿಶ್ ಅಲಿ ಮತ್ತು ಗೋಪಿಕಾ ಬಾಬು ಸೇರಿದ್ದಾರೆ.
ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ಪೊಲೀಸರೊಂದಿಗೆ ಘರ್ಷಣೆಯಲ್ಲಿ ಕೊನೆಗೊಂಡಿತು. ನಾಲ್ವರು ಜೆಎನ್‌ಯು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಸೇರಿದಂತೆ ಒಟ್ಟು 51 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.


ಗುರುವಾರ ರಾತ್ರಿ ವಸಂತ್ ಕುಂಜ್ ಉತ್ತರ ಪೊಲೀಸರು ಪ್ರತಿಭಟನಾಕಾರರ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿಲ್ಲಿ ಪೊಲೀಸರ ಪ್ರಕಾರ, ವಿಶ್ವವಿದ್ಯಾನಿಲಯದ ಆಡಳಿತವು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಹೊರಗೆ ಪ್ರತಿಭಟನೆಗೆ ಯಾವುದೇ ಅನುಮತಿ ನೀಡಿಲ್ಲ. ಇದರ ಹೊರತಾಗಿಯೂ, ಗುರುವಾರ ಮಧ್ಯಾಹ್ನ ಸುಮಾರು 400 ರಿಂದ 500 ವಿದ್ಯಾರ್ಥಿಗಳು ಮುಖ್ಯ ದ್ವಾರದ ಕಡೆಗೆ ಮೆರವಣಿಗೆ ನಡೆಸಲು ಪ್ರಾರಂಭಿಸಿದರು. ಬ್ಯಾರಿಕೇಡ್‌ಗಳಿಗೆ ಹಾನಿಗೊಳಿಸಿದರು. ಪ್ರತಿಭಟನೆ ಹಿಂಸಾತ್ಮಕವಾಗಿತ್ತು. ಪ್ರತಿಭಟನಾಕಾರರು ಬ್ಯಾನರ್‌ಗಳು, ಕೋಲುಗಳು ಮತ್ತು ಬೂಟುಗಳನ್ನು ಎಸೆದರು ಮತ್ತು ಕೆಲವರು ಪೊಲೀಸ್ ಸಿಬ್ಬಂದಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.