ನಾಯಿ ನೆಕ್ಕಿದ್ದಕ್ಕೆ ಕೈಕಾಲುಗಳನ್ನೇ ಕಳೆದುಕೊಂಡ ಮಹಿಳೆ.

ನಾಯಿ (Dog) ಎಂದರೆ ನಮಗೆಲ್ಲಾ ತುಂಬಾ ಪ್ರೀತಿ. ಮನೆಯಲ್ಲಿ ನಾಯಿಗಳಿದ್ದರೆ ಅವುಗಳನ್ನು ಮುದ್ದಾಡುವುದು, ಅವು ನಮ್ಮನ್ನು ನೆಕ್ಕುವುದು ತುಂಬಾ ಸಾಮಾನ್ಯ(Very Common). ಆದರೆ, ಯುಕೆ ಮೂಲದ ಮಂಜಿತ್ ಸಂಘಾ (Manjith Sangha) ಎಂಬ 52 ವರ್ಷದ ಮಹಿಳೆಯ ಜೀವನದಲ್ಲಿ ಒಂದು ಪುಟ್ಟ ನಾಯಿ ನೆಕ್ಕಿದ್ದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ನಾಯಿ ನೆಕ್ಕಿದ ಕೇವಲ 24 ಗಂಟೆಗಳಲ್ಲಿ ಅವರ ಬದುಕು ನರಕವಾಯಿತು. ಪ್ರೀತಿಯ ನಾಯಿ ಕೈ ಮೇಲಿದ್ದ ಒಂದು ಪುಟ್ಟ ಗಾಯವನ್ನು ನೆಕ್ಕಿದ್ದರಿಂದ ಅವರಿಗೆ ‘ಸೆಪ್ಸಿಸ್’ ಎಂಬ ಮಾರಣಾಂತಿಕ ಸೋಂಕು ತಗುಲಿತು. ಮುಂದೆ ನಡೆದದ್ದೇ ಬೇರೆ. ಜೀವ ಉಳಿಸಲು ವೈದ್ಯರ ಪಣ!
ವೈದ್ಯರು ಅವರ ಪ್ರಾಣ ಉಳಿಸಲು ನಾಲ್ಕೂ ಕೈಕಾಲುಗಳನ್ನು ಕತ್ತರಿಸಿ ತೆಗೆಯಬೇಕಾಯಿತು. ನಾಯಿಗಳ ಮೇಲಿನ ಪ್ರೀತಿ ಇರಲಿ, ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಏನಾಗಬಹುದು ಎಂಬುದಕ್ಕೆ ಈ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.ಕೇವಲ ಒಂದು ದಿನದಲ್ಲಿ ದುಸ್ತರವಾದ ಬದುಕು
2025ರ ಜುಲೈನಲ್ಲಿ ಮಂಜಿತ್ ಸಂಘಾ ಕೆಲಸ ಮುಗಿಸಿ ಮನೆಗೆ ಬಂದಾಗ ಅವರಿಗೆ ಸ್ವಲ್ಪ ಸುಸ್ತು ಎನಿಸಿತ್ತು. ಆದರೆ ಮರುದಿನ ಬೆಳಿಗ್ಗೆ ನೋಡುವಷ್ಟರಲ್ಲಿ ಅವರು ಪ್ರಜ್ಞೆ ತಪ್ಪಿದ್ದರು. ಕೈಕಾಲುಗಳು ಐಸ್‌ನಂತೆ ತಣ್ಣಗಾಗಿದ್ದವು, ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು ಮತ್ತು ಉಸಿರಾಡಲು ಕಷ್ಟಪಡುತ್ತಿದ್ದರು. ಅವರ ಪತಿ ಕಮಲ್‌ಜಿತ್ ಸಂಘಾ ತಕ್ಷಣ ಅವರನ್ನು ವುಲ್ವರ್‌ಹ್ಯಾಂಪ್ಟನ್‌ನ ನ್ಯೂ ಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶನಿವಾರ ನಾಯಿಯ ಜೊತೆ ಆಟವಾಡುತ್ತಿದ್ದವಳು, ಸೋಮವಾರ ಕೋಮಾ ಸ್ಥಿತಿಗೆ ತಲುಪಿದ್ದಳು. ಇದು ಹೇಗೆ ಸಾಧ್ಯ? ಎಂದು ಕಮಲ್‌ಜಿತ್ ಅಂದು ಕಣ್ಣೀರು ಹಾಕಿದ್ದರು. ಮಂಜಿತ್ ಅವರಿಗೆ ಆಸ್ಪತ್ರೆಯಲ್ಲಿ ಆರು ಬಾರಿ ಹೃದಯಾಘಾತ ಸಂಭವಿಸಿತ್ತು.ಆ ಪುಟ್ಟ ಗಾಯ ಮತ್ತು ಆ ಅಪಾಯಕಾರಿ ಬ್ಯಾಕ್ಟೀರಿಯಾ


ವೈದ್ಯರು ಪರೀಕ್ಷೆ ಮಾಡಿದಾಗ ಮಂಜಿತ್ ಅವರ ರಕ್ತದಲ್ಲಿ ‘ಕ್ಯಾಪ್ನೋಸೈಟೋಫಾಗಾ ಕ್ಯಾನಿಮೋರ್ಸಸ್’ ಎಂಬ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಯಿತು. ಈ ಬ್ಯಾಕ್ಟೀರಿಯಾ ನಾಯಿಗಳ ಲಾಲಾರಸದಲ್ಲಿರುತ್ತದೆ ಮತ್ತು ನಾಯಿಗಳಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಮಂಜಿತ್ ಅವರ ಕೈ ಮೇಲಿದ್ದ ಒಂದು ಚಿಕ್ಕ ಗಾಯ ಅಥವಾ ಪರಚಿದ ಗುರುತನ್ನು ನಾಯಿ ನೆಕ್ಕಿದಾಗ, ಈ ಬ್ಯಾಕ್ಟೀರಿಯಾ ಅವರ ರಕ್ತಕ್ಕೆ ಸೇರಿತು.
ಇಡೀ ದೆಹಕ್ಕೆ ಹರಡಿದ ಸೋಂಕು!
ಇದು ಇಡೀ ದೇಹಕ್ಕೆ ಸೋಂಕು ಹರಡುವಂತೆ ಮಾಡಿ ‘ಸೆಪ್ಸಿಸ್’ ಸ್ಥಿತಿಗೆ ತಲುಪಿಸಿತು. ಅವರ ಪ್ರಾಣ ಉಳಿಸಲು ವೈದ್ಯರು ಅನಿವಾರ್ಯವಾಗಿ ಮಂಡಿಯ ಕೆಳಗೆ ಎರಡೂ ಕಾಲುಗಳನ್ನು ಮತ್ತು ಎರಡೂ ಕೈಗಳನ್ನು ಕತ್ತರಿಸಬೇಕಾಯಿತು. ಜೊತೆಗೆ ಅವರ ಗುಲ್ಮವನ್ನು ಕೂಡ ತೆಗೆಯಬೇಕಾಯಿತು.ಏನಿದು ಸೆಪ್ಸಿಸ್? ಮತ್ತು ಅದರ ಲಕ್ಷಣಗಳೇನು?
ಸೆಪ್ಸಿಸ್ ಎಂಬುದು ದೇಹವು ಯಾವುದಾದರೂ ಸೋಂಕಿಗೆ ಅತಿಯಾಗಿ ಪ್ರತಿಕ್ರಿಯಿಸಿದಾಗ ಉಂಟಾಗುವ ಸ್ಥಿತಿ. ನಮ್ಮ ದೇಹದ ರೋಗನಿರೋಧಕ ಶಕ್ತಿಯೇ ನಮ್ಮ ಅಂಗಾಂಗಗಳ ಮೇಲೆ ದಾಳಿ ಮಾಡಲಾರಂಭಿಸುತ್ತದೆ.ಇದರಿಂದ ರಕ್ತದೊತ್ತಡ ಕಡಿಮೆಯಾಗಿ ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ.
ಸೆಪ್ಸಿಸ್‌ನ ಕೆಲವು ಲಕ್ಷಣಗಳು ಇಲ್ಲಿವೆ:
ಚರ್ಮದ ಮೇಲೆ ಕೆಂಪು ಬಣ್ಣದ ದದ್ದುಗಳು ಅಥವಾ ಸಣ್ಣ ಕಲೆಗಳು.
ತೀವ್ರ ಜ್ವರ ಅಥವಾ ಅತಿ ಕಡಿಮೆ ದೈಹಿಕ ತಾಪಮಾನ.
ಉಸಿರಾಟದ ತೊಂದರೆ ಮತ್ತು ಎದೆಬಡಿತ ಹೆಚ್ಚಾಗುವುದು.
ಸುಸ್ತು, ನಿಶ್ಯಕ್ತಿ ಮತ್ತು ಪ್ರಜ್ಞೆ ತಪ್ಪುವುದು.
ಮೂತ್ರ ವಿಸರ್ಜನೆ ಕಡಿಮೆಯಾಗುವುದುಜಾಗೃತೆ ವಹಿಸಬೇಕಾದ ಮುನ್ನೆಚ್ಚರಿಕೆಗಳು!
ನಾಯಿ ಅಥವಾ ಬೆಕ್ಕುಗಳು ನಿಮ್ಮನ್ನು ನೆಕ್ಕಿದಾಗ ತಕ್ಷಣ ಆ ಜಾಗವನ್ನು ಸೋಪಿನಿಂದ ತೊಳೆದುಕೊಳ್ಳಿ. ವಿಶೇಷವಾಗಿ ಕೈ ಮೇಲೆ ಗಾಯಗಳಿದ್ದಾಗ ಅಥವಾ ಪರಚಿದ ಗುರುತುಗಳಿದ್ದಾಗ ಪ್ರಾಣಿಗಳಿಂದ ದೂರವಿರುವುದು ಒಳ್ಳೆಯದು. ಒಂದು ವೇಳೆ ನಾಯಿ ನೆಕ್ಕಿದ ನಂತರ ಜ್ವರ ಅಥವಾ ಅಸಾಮಾನ್ಯ ಸುಸ್ತು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದು ನಾಯಿಗಳು ಅಥವಾ ಇತರ ಸಾಕು ಪ್ರಾಣಿಗಳು ಜೊತೆಗಿರುವಾಗ ನಮ್ಮ ಸುರಕ್ಷತೆಯ ಬಗ್ಗೆ ಗಮನ ಹರಿಸಲು ಒಂದು ಎಚ್ಚರಿಕೆಯಾಗಿದೆ.