ಪುಟ್ಟ ಮಗನ ಸಾ*ವು: ಚಾಲಕನನ್ನ ಕ್ಷಮಿಸಿ ಮಾನವೀಯತೆ ಮೆರೆದ ಪೋಷಕರು!

ಶಾರ್ಜಾ (UAE): ಶಾರ್ಜಾದ ಮುವೈಲೆಹ್ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ 22 ತಿಂಗಳ ಭಾರತೀಯ ಮಗು ಅಲನ್ ರೂಮಿ ಮೃತಪಟ್ಟ ಘಟನೆ ಮನಕಲಕುವಂತಿದ್ದು, ಮಗುವಿನ ಪೋಷಕರು ಭಾರತೀಯ ಮೂಲದ ಚಾಲಕನ ವಿರುದ್ಧ ದೂರು ದಾಖಲಿಸದೇ ಕ್ಷಮಿಸಿರುವುದು ಗಮನ ಸೆಳೆದಿದೆ ಎಂದು Khaleej Times ಮತ್ತು Gulf News ವರದಿ ಮಾಡಿವೆ.

ತಾನು ಮಾಡದ ತಪ್ಪಿಗೆ ಕೋಟಿಗಟ್ಟಲೆ ಪರಿಹಾರ ಹಣ ಪಾವತಿಸಿದರೂ ಬಿಡುಗಡೆಯಾಗದೇ, ಸೌದಿ ಅರೇಬಿಯಾದ ಜೈಲಿನ ಕಂಬಿಗಳಿಂದ ಕಾಯುತ್ತಿರುವ ಕೇರಳದ ಹೌಸ್ ಡ್ರೈವರ್ ರಹೀಂ ಪ್ರಕರಣದ ಮಧ್ಯೆ, ಶಾರ್ಜಾದಲ್ಲಿ ನಡೆದ ಈ ಘಟನೆ ಜಗತ್ತಿನ ಗಮನ ಸೆಳೆದಿದೆ.
2015ರಲ್ಲಿ ಟರ್ಕಿಯ ಕಡಲತೀರದಲ್ಲಿ ಕೊಚ್ಚಿಹೋದ ಸಿರಿಯನ್ ವಲಸಿಗ ಮಗು ಆಲನ್ ಕುರ್ದಿಯ ದುರಂತ ಚಿತ್ರ ಜಗತ್ತಿನ ಮನಸ್ಸಾಕ್ಷಿಯನ್ನು ಕದಡಿತ್ತು. ಆ ನೆನಪಿಗೆ ಗೌರವ ಸೂಚಕವಾಗಿ 10 ವರ್ಷದ ಬಳಿಕ ತಮಗೆ ಮಗು ಜನಿಸಿದಾಗ ದುಬೈ ನಿವಾಸಿ ಕೇರಳ ಮೂಲದ ಶರಫುದ್ದೀನ್ ಹಾಗೂ ಅವರ ಪತ್ನಿ ತಮ್ಮ ಮಗನಿಗೆ ‘ಆಲನ್’ ಎಂದು ಹೆಸರಿಟ್ಟಿದ್ದರು. ಕವಿ ರೂಮಿ ಅವರ ಹೆಸರನ್ನೂ ಸೇರಿಸಿ ‘ಆಲನ್ ರೂಮಿ’ ಎಂದು ಕರೆಯುತ್ತಿದ್ದರು.
“ಅವನು ನಮ್ಮ ಜೀವನದ ಬೆಳಕು. ಆದರೆ ದೇವರು ಅವನನ್ನು ಅಲ್ಪಕಾಲ ಮಾತ್ರ ನಮ್ಮೊಡನೆ ಇರಿಸಲು ನಿರ್ಧರಿಸಿದ್ದ,” ಎಂದು ಶರಫುದ್ದೀನ್ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಅಪಘಾತ ಹೇಗೆ ಸಂಭವಿಸಿತು?
ಘಟನೆಯ ದಿನ ಶರಫುದ್ದೀನ್ ದುಬೈ ಇನ್ವೆಸ್ಟ್ಮೆಂಟ್ ಪಾರ್ಕ್ ಮತ್ತು ಅಲ್ ಕ್ವೋಝ್ ಪ್ರದೇಶದಲ್ಲಿ ಕೆಲಸದಲ್ಲಿದ್ದರು. ಅವರ ಪತ್ನಿ ಮಗನೊಂದಿಗೆ ವಸತಿ ಕಟ್ಟಡದ ಕೆಳಭಾಗದಲ್ಲಿರುವ ಮರಳಿನ ಪಾರ್ಕಿಂಗ್ ಪ್ರದೇಶದ ಬಳಿಯ ಕಸದ ತೊಟ್ಟಿಯ ಬಳಿ ತೆರಳಿದ್ದರು. ಅಲ್ಲಿಯೇ ಪಕ್ಕದಲ್ಲಿ ಮಕ್ಕಳು ಆಟವಾಡುವ ಪ್ರದೇಶವಿತ್ತು. ಅದೇ ವೇಳೆ ಪಕ್ಕದ ಮನೆಯವರು ಅವರ ಮಗುವಿನೊಂದಿಗೆ ಆಟವಾಡಲು ಬಂದರು. ಆಲನ್ ಗೂ ಆ ಮಗುವಿಗೂ ಒಂದೇ ವಯಸ್ಸು. ಆಟವಾಡುವ ವೇಳೆ ಇಬ್ಬರೂ ಬೆಕ್ಕನ್ನು ನೋಡಿ ಅದರ ಹಿಂದೆ ಓಡಿದರು.
“ನಾನು ಅವರನ್ನು ನಿಲ್ಲಿ ಎಂದು ಕರೆದಾಗ ಇನ್ನೊಬ್ಬ ಮಗು ನಿಂತಿತು. ಆದರೆ ಆಲನ್ ನಾನು ಹಿಂದೆ ಓಡುತ್ತಿರುವುದನ್ನು ಆಟವೆಂದು ಭಾವಿಸಿ ನಗುತ್ತಾ ಮುಂದುವರಿದ. ಅದೇ ವೇಳೆ ಪಾರ್ಕಿಂಗ್ ಜಾಗದಿಂದ ಕಾರನ್ನು ಹೊರತೆಗೆಯುತ್ತಿದ್ದ ಚಾಲಕ, ಆಲನ್ ನನ್ನು ಗಮನಿಸಿರಲಿಲ್ಲ. ಅದು ಯಾರ ತಪ್ಪೂ ಅಲ್ಲದ ಭೀಕರ ಅಪಘಾತ,” ಎಂದು ಆಲನ್ ತಾಯಿ ಘಟನೆಯನ್ನು ವಿವಿರಿಸಿದರು.
ಅಪಘಾತದ ನಂತರ ಆಂಬ್ಯುಲೆನ್ಸ್ ಗಾಗಿ ಕಾಯದೇ ಚಾಲಕ ತಕ್ಷಣವೇ ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಸಲಹೆಯಂತೆ ಬಳಿಕ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ವರ್ಗಾಯಿಸಲಾಯಿತಾದರೂ, ಆಂತರಿಕ ಗಾಯಗಳಿಂದ ಮಗು ಮೃತಪಟ್ಟಿತು.

ಅಪಘಾತದ ಬಳಿಕ ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಯಿತು. ಆದರೆ ಪೋಷಕರು ಚಾಲಕನ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದರು.
“ಆ ರಾತ್ರಿ ಚಾಲಕನನ್ನು ವಿಚಾರಣೆಗೆ ವಶಕ್ಕೆ ಪಡೆದಿರುವುದು ತಿಳಿದಾಗಲೇ ನಾವು ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ತಿಳಿಸಿದ್ದೇವೆ. ಅದನ್ನು ಲಿಖಿತವಾಗಿಯೂ ತಿಳಿಸಿದ್ದೇವೆ. ಇದು ಯಾರ ತಪ್ಪೂ ಅಲ್ಲ. ಅದೊಂದು ದುರದೃಷ್ಟಕರ ಘಟನೆ. ಚಾಲಕನನ್ನು ಶಿಕ್ಷಿಸಿದರೂ ನಮ್ಮ ಮಗ ಹಿಂದಿರುಗುವುದಿಲ್ಲ,” ಎಂದು ಶರಫುದ್ದೀನ್ ವಿಶಾಲ ಹೃದಯದಿಂದ ಹೇಳಿದ್ದಾರೆ.
“ನಮ್ಮ ನಷ್ಟ ನಮ್ಮದೇ. ತಿಳಿಯದೆ ನಡೆದ ಘಟನೆಯಿಂದ ಮತ್ತೊಂದು ಕುಟುಂಬವೂ ದುಃಖಕ್ಕೆ ಸಿಲುಕಬಾರದು,” ಎಂದು ಅವರು ತಿಳಿಸಿದ್ದಾರೆ.
ಚಾಲಕನನ್ನು ನಂತರ ಬಿಡುಗಡೆ ಮಾಡಲಾಗಿದ್ದು, ಅಪಘಾತದ ದಿನ ಪಾಸ್ಪೋರ್ಟ್ ಅನ್ನು ಗ್ಯಾರಂಟಿಯಾಗಿ ಉಳಿಸಿಕೊಳ್ಳಲಾಗಿದೆ. ಪ್ರಕರಣವನ್ನು ಸಾರ್ವಜನಿಕ ಅಭಿಯೋಜಕರಿಗೆ ಒಪ್ಪಿಸಲಾಗಿದೆ ಎಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಜೆ 7 ಗಂಟೆಯ ನಂತರ ಸಂಭವಿಸಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಆಲನ್ ರೂಮಿಯನ್ನು ಮರುದಿನ ದುಬೈನಲ್ಲಿ ದಫನ ಮಾಡಲಾಯಿತು. ಅದೇ ದಿನ ದಂಪತಿಗಳು ಭಾರತಕ್ಕೆ ಮರಳಿದರು.
ಇದು ಯುಎಇಯಲ್ಲಿ ಕುಟುಂಬ ಒಟ್ಟಿಗೆ ಆಚರಿಸಬೇಕಿದ್ದ ಮೊದಲ ರಮಝಾನ್ ಆಗಿತ್ತು. “ರಮಝಾನ್ ನ ಕೊನೆಯ ಹತ್ತು ದಿನಗಳಲ್ಲಿ ಉಮ್ರಾ ಮಾಡಲು ಯೋಜಿಸಿದ್ದೆವು. ನಂತರ ಈದ್ ಉಲ್ ಫಿತರ್ ಗೆ ಭಾರತಕ್ಕೆ ತೆರಳಬೇಕಿತ್ತು. ಯುಎಇಯಲ್ಲೇ ಶಾಶ್ವತವಾಗಿ ನೆಲೆಸಲು ಕಂಪೆನಿ ಕುಟುಂಬ ವೀಸಾ ನೀಡಲು ಸಿದ್ಧವಾಗಿತ್ತು. ರಾಸ್ ಅಲ್ ಖೈಮಾ ಅಥವಾ ಫುಜೈರಾದಲ್ಲಿ ವಾಸಿಸಲು ಅವಕಾಶ ಮಾಡುವಂತೆ ಕೇಳಿದ್ದೆವು. ನಮಗೆ ಹಲವು ಯೋಜನೆಗಳಿದ್ದವು. ಆದರೆ ದೇವರ ಯೋಜನೇ ಬೇರೆಯೇ ಆಗಿತ್ತು. ನಾವು ದೇವರ ಯೋಜನೆಯಲ್ಲಿಯೇ ಭರವಸೆಯಿಟ್ಟು ಮುಂದುವರಿಯಲು ಪ್ರಯತ್ನಿಸುತ್ತಿದ್ದೇವೆ. ಆಲನ್ ಗೆ ಎಪ್ರಿಲ್ 23ಕ್ಕೆ ಎರಡು ವರ್ಷ ತುಂಬುತ್ತಿತ್ತು”, ಎಂದು ಶರಫುದ್ದೀನ್ ಭಾವುಕರಾದರು.
ದುಃಖದ ನಡುವೆಯೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಶರಫುದ್ದೀನ್ ಪೋಷಕರು ಮತ್ತು ಚಾಲಕರಿಗೆ ಮನವಿ ಮಾಡಿದ್ದಾರೆ. “ಕ್ಷಣಿಕ ಅಲಕ್ಷ್ಯ ನಮ್ಮ ಇಡೀ ಜಗತ್ತನ್ನು ಕುಸಿಯುವಂತೆ ಮಾಡಿತು. ರಸ್ತೆ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಅಗತ್ಯ,” ಎಂದು ಅವರು ತಿಳಿಸಿದ್ದಾರೆ.
ಶಾರ್ಜಾ ಪೊಲೀಸರು ಇದೇ ರೀತಿಯ ಅಪಘಾತಗಳನ್ನು ತಪ್ಪಿಸಲು ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸುವಂತೆ ಮನವಿ ಮಾಡಿದ್ದಾರೆ.