ಶಿರಸಿಯ ಹೆಮ್ಮೆಯ ಪುತ್ರ ಈಗ ನ್ಯಾಯಾಧೀಶ ಸುಮಂತ್ ನಾಯ್ಕ್‌ಗೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಯುವ ಪ್ರತಿಭೆ ಸುಮಂತ್ ಮಂಜುನಾಥ್ ನಾಯ್ಕ್ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲೇ ಕರ್ನಾಟಕ ನ್ಯಾಯಾಂಗ ಸೇವೆಯಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. 2025ರ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಇಡೀ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆಯುವ ಮೂಲಕ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.


ಸುಮಂತ್ ಅವರು ಕಾನೂನು ಕ್ಷೇತ್ರದಲ್ಲಿ ಸುಪ್ರಸಿದ್ಧ ಕುಟುಂಬದಿಂದ ಬಂದವರಾಗಿದ್ದಾರೆ. ಇವರು ಬೆಂಗಳೂರು ಲೋಕಾಯುಕ್ತದ ಸರ್ಕಾರಿ ಅಭಿಯೋಜಕರಾದ ಮಂಜುನಾಥ್ ನಾಯ್ಕ್ ಹಾಗೂ ವಕೀಲೆ ಸುಜಾತಾ ನಾಯ್ಕ್ ದಂಪತಿಯ ಪುತ್ರ. ಪೋಷಕರಿಬ್ಬರೂ ಕಾನೂನು ವೃತ್ತಿಯಲ್ಲಿದ್ದು, ಮಗ ಈಗ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಹೆಗಡೆಕಟ್ಟಾದ ನಿವಾಸಿಗಳಲ್ಲಿ ಹಾಗೂ ಅವರ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದೆ.

ಸುಮಂತ್ ಕೇವಲ ಓದಿನಲ್ಲಿ ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಇವರು ಚೆಸ್ ಆಟದಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ್ದು, ತಮ್ಮ ಚತುರ ಬುದ್ಧಿವಂತಿಕೆಯನ್ನು ಕ್ರೀಡೆಯಲ್ಲೂ ಪ್ರದರ್ಶಿಸಿದ್ದಾರೆ. ಕೇವಲ 25ನೇ ವಯಸ್ಸಿಗೆ ನ್ಯಾಯಾಧೀಶರ ಪಟ್ಟ ಅಲಂಕರಿಸುವ ಮೂಲಕ ಸುಮಂತ್ ನಾಯ್ಕ್ ಅವರು ಜಿಲ್ಲೆಯ ಸಾವಿರಾರು ಯುವ ಕಾನೂನು ಪದವೀಧರರಿಗೆ ಮಾದರಿಯಾಗಿದ್ದಾರೆ.