ಜೀವದಾತ ಪುಟ್ಟ ಕಂದ: 5 ಮಕ್ಕಳಿಗೆ ಪುನರ್ಜನ್ಮ ನೀಡಿದ 10 ತಿಂಗಳ ಅಲಿನ್!

ತಿರುವನಂತಪುರಂ: ಪ್ರಪಂಚವೇ ನೋಡದ ಅಂಬೆಗಾಲಿಡುತ್ತಿದ್ದ ಪುಟ್ಟ ಕಂದಮ್ಮ 5 ಮಕ್ಕಳ ಜೀವ ಉಳಿಸಲು ಕಾರಣವಾದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ. ತಮ್ಮ ಏಕೈಕ ಪುತ್ರಿಯನ್ನ ಅಪಘಾತದಲ್ಲಿ (Accident) ಕಳೆದುಕೊಂಡ ದಂಪತಿ, ಉಳಿದ ಮಕ್ಕಳ ಜೀವ ಉಳಿಸುವ ಗಟ್ಟಿ ಮನಸು ಮಾಡಿದ್ದಾರೆ. 5 ಮಕ್ಕಳ ಜೀವ ಉಳಿಸಲು ಕಾರಣರಾಗಿದ್ದಾರೆ ಕೇರಳ ದಂಪತಿ ಅರುಣ್ ಹಾಗೂ ಶೆರಿನ್. ಆ ಮೂಲಕ ಅಮರವಾಗಿದ್ದಾಳೆ ಮಗು ಅಲಿನ್ ಶೆರಿನ್ (Alin Sherin Abraham).

ಹೌದು. ಈ ಪ್ರಕರಣ ಈಗ ದೇಶದ ಗಮನ ಸೆಳೆದಿದೆ. ಅಲಿನ್ ಶೆರಿನ್ ಪೋಷಕರ ಒಪ್ಪಿಗೆ ಮೇರೆಗೆ ಅಂಗಾಂಗಗಳನ್ನ ಕೇರಳದ ವಿವಿಧ ಆಸ್ಪತ್ರೆಗಳಿಗೆ (Kerala Hospital) ದಾನ ಮಾಡಲಾಗಿದೆ. ಈ ಮೂಲಕ 10 ತಿಂಗಳ ಅಲಿನ್ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂದೆನಿಸಿಕೊಂಡಿದ್ದಾಳೆ.

ಪ್ರಪಂಚ ನೋಡುವ ಮುನ್ನವೇ ಕಣ್ಮುಚ್ಚಿದ ಕಂದಮ್ಮ – ಆಗಿದ್ದೇನು?
ಇದೇ ಫೆ.5 ರಂದು ಮಧ್ಯಾಹ್ನ ಸುಮಾರು 2:30 ರ ವೇಳೆಗೆ ಅಲಿನ್ ಶೆರಿನ್ ತನ್ನ ಕುಟುಂಬದೊಂದಿಗೆ ಕೊಟ್ಟಾಯಂನಿಂದ ಎಂ.ಸಿ ರಸ್ತೆ ಮೂಲಕ ತಿರುವಲ್ಲಾಗೆ ಪ್ರಯಾಣಿಸುತ್ತಿದ್ದಳು. ಆದ್ರೆ ಆ ದಿನ ಅಲಿನ್ ಬಾಳಲ್ಲಿ ವಿಧಿ ಆಟ ಆಡಿತ್ತು.
ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಕೊಟ್ಟಾಯಂನ ಪಲ್ಲಂ ಜಂಕ್ಷನ್ ಬಳಿ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಅಲಿನ್ಗೆ ಗಂಭೀರ ಗಾಯವಾಗಿತ್ತು. ಆಕೆಯ ಪೋಷಕರು, ಅಜ್ಜ, ಅಜ್ಜಿ ಸಣ್ಣಪುಟ್ಟ ಗಾಯದಿಂದ ಬದುಕುಳಿದರು. ತಕ್ಷಣವೇ ಅಲಿನ್ಳನ್ನ ತಿರುವಲ್ಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದರು. ಬಳಿಕ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ, ಪೋಷಕರ ಸತತ ಪ್ರಯತ್ನದಿಂದಲೂ ಅಲಿನ್ ಬದುಕುಳಿಯಲಿಲ್ಲ. ಫೆಬ್ರುವರಿ 10 ರಂದು ಅಲಿನ್ ನಿಧನಳಾದಳು ಎಂದು ಅಮೃತಾ ಆಸ್ಪತ್ರೆಯ ವೈದ್ಯರು ಘೋಷಿಸಿದರು.
ಅತೀವ ದುಃಖದ ನಡುವೆಯೂ ಆಲಿನ್ ಪೋಷಕರು ಆಂಗಾಂಗ ದಾನಕ್ಕೆ ಸಮ್ಮತಿಸಿದರು. ಕಣ್ಣು, ಹೃದಯ, ಕಿಡ್ನಿ ಮತ್ತೀತರ ಉಪಯುಕ್ತ ಅಂಗಾಂಗಗಳನ್ನ ತಿರುವನಂತಪುರದ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಅಂಗಾಂಗಗಳ ರವಾನೆಗೆ ಕೊಚ್ಚಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.