ಮಂಜೇಶ್ವರ ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಭಾರಿ ಪೈಪೋಟಿ!

ಮಂಜೇಶ್ವರ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಶುಕ್ರವಾರ ಚಾಲನೆ ದೊರೆಯಲಿದೆ. ತಳಮಟ್ಟದಿಂದ ಪ್ರಸ್ತುತ ಜವಾಬ್ದಾರಿಯುತ ನೇತಾರರ ಅಭಿಪ್ರಾಯ ಸಂಗ್ರಹಣೆ ಈಗಾಗಲೇ ಆರಂಭವಾಗಿದೆ ಎಂಬ ವರದಿಗಳಿವೆ.

ಮಂಜೇಶ್ವರವು ಬಿಜೆಪಿಯ ಶಕ್ತಿಕೇಂದ್ರವಾಗಿದೆ. ಕೇರಳ ರಾಜ್ಯದಲ್ಲಿ ಕಳೆದ 45 ವರ್ಷಗಳಿಂದ ಬಿಜೆಪಿಗೆ 60 ಸಾವಿರಕ್ಕೂ ಅಧಿಕ ಮತಗಳು ಚಲಾವಣೆಯಾಗುವ ಪ್ರಮುಖ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಅನೇಕ ವರ್ಷಗಳಿಂದ ಇಲ್ಲಿ ಮುಸ್ಲಿಂ ಲೀಗ್ ಗೆಲ್ಲುತ್ತಿದ್ದರೂ, ಬಿಜೆಪಿಯ ಸೋಲು ಕೇವಲ ಬೆರಳೆಣಿಕೆಯ ಮತಗಳ ಅಂತರದಿಂದ ಮಾತ್ರ ಇರುತ್ತದೆ. ಮಂಜೇಶ್ವರದಲ್ಲಿ ಖಾತೆ ತೆರೆಯಲು ಬಿಜೆಪಿ ಅನೇಕ ಪ್ರಯೋಗಗಳನ್ನು ಮಾಡುತ್ತಿದೆ. ಅಭ್ಯರ್ಥಿಗಳ ಘೋಷಣೆ ಇನ್ನೂ ಅಂತಿಮವಾಗಿಲ್ಲದಿದ್ದರೂ, ಸದ್ಯ ಚಲಾವಣೆಯಲ್ಲಿರುವ ಪ್ರಬಲ ಆಕಾಂಕ್ಷಿಗಳ ಹೆಸರುಗಳು ಇಂತಿವೆ:

- ಕೆ. ಸುರೇಂದ್ರನ್: ಇವರನ್ನು ಅಖಾಡಕ್ಕೆ ಇಳಿಸಿ ಈ ಬಾರಿ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಮಾಜಿ ರಾಜ್ಯಾಧ್ಯಕ್ಷರಾದ ಕೆ. ಸುರೇಂದ್ರನ್ ಪಟ್ಟಿಯಲ್ಲಿರುವ ಪ್ರಬಲ ಸ್ಪರ್ಧಿ. ಕಳೆದ ಬಾರಿ ಕೇವಲ 89 ಮತಗಳಿಂದ ಸೋತಿದ್ದರಿಂದ ಇವರ ಪರವಾಗಿ ಅನುಕಂಪದ ಅಲೆ ಇದೆ. ರಾಜ್ಯ ಬಿಜೆಪಿಯ ಈ ಸ್ಟಾರ್ ಅಭ್ಯರ್ಥಿ ಈ ಬಾರಿ ಯಶಸ್ವಿಯಾಗುತ್ತಾರೆಯೇ ಎಂದು ಕಾದು ನೋಡಬೇಕು.
- ಅಶ್ವಿನಿ ಎಂ. ಎಲ್.: ಮಾಜಿ ಬ್ಲಾಕ್ ಪಂಚಾಯತ್ ಸದಸ್ಯೆ ಹಾಗೂ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆಯಾಗಿರುವ ಇವರು, ಪಕ್ಷದಲ್ಲಿ ಹಠಾತ್ ಆಗಿ ಉನ್ನತ ಪದವಿಗಳನ್ನು ಪಡೆದವರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅನುಭವ ಇವರಿಗಿದೆ. ಆದರೆ, ಮಂಡಲದಲ್ಲಿ ಅಶ್ವಿನಿಯವರ ಪರ ಮತ್ತು ವಿರೋಧದ ಅಭಿಪ್ರಾಯಗಳು ಕೇಳಿಬರುತ್ತಿವೆ.
- ವಿಜಯ್ ಕುಮಾರ್ ರೈ: ಅನೇಕ ವರ್ಷಗಳಿಂದ ಯುವಮೋರ್ಚಾ ಹಾಗೂ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಇವರಿಗಿದೆ. ಮಂಗಳ್ಪಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಇವರು ಆಯ್ಕೆಯಾಗಿದ್ದರು. ಆದರೆ, ಈ ಬಾರಿ ವರ್ಕಾಡಿ ಜಿಲ್ಲಾ ಡಿವಿಷನ್‌ನಿಂದ ದೊಡ್ಡ ಅಂತರದಲ್ಲಿ ಸೋತಿರುವುದು ನಿರಾಸೆ ಮೂಡಿಸಿದೆ. ಅಲ್ಲದೆ, ವಿಜಯ್ ಕುಮಾರ್ ರೈ ಹಾಗೂ ಜಿಲ್ಲಾ ಬಿಜೆಪಿ ನೇತೃತ್ವದ ಮಧ್ಯೆ ಸರಿಯಾದ ಹೊಂದಾಣಿಕೆ ಇಲ್ಲ ಎನ್ನಲಾಗುತ್ತಿದೆ. ಟಿವಿ ಮಾಧ್ಯಮಗಳಲ್ಲಿ ಪಕ್ಷದ ಆಂತರಿಕ ವಿಚಾರಗಳನ್ನು ಚರ್ಚಿಸಿದ ಬಗ್ಗೆ ಇವರ ವಿರುದ್ಧ ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿವೆ.
- ಬಿ. ಎಂ. ಆದರ್ಶ: ಪ್ರಸ್ತುತ ಮಂಜೇಶ್ವರ ಮಂಡಲದ ಅಧ್ಯಕ್ಷರಾಗಿರುವ ಇವರು ಪಕ್ಷದ ಸಂಘಟನಾ ಪ್ರಕ್ರಿಯೆಯಲ್ಲಿ ಪ್ರಮುಖ ಹೆಸರು. ಎರಡನೇ ಬಾರಿ ಮಂಡಲ ಅಧ್ಯಕ್ಷರಾಗಿ, ಮೂರು ಬಾರಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಎರಡು ಬಾರಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ವೃತ್ತಿಯಿಂದ ಅಧ್ಯಾಪಕರಾಗಿರುವ ಇವರು ಉನ್ನತ ವ್ಯಾಸಂಗ ಪಡೆದಿದ್ದು, ಪಕ್ಷದೊಳಗೆ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಮಂಜೇಶ್ವರ ಪಂಚಾಯತ್ ಸದಸ್ಯರಾಗಿಯೂ ಇವರು ಆಯ್ಕೆಯಾಗಿದ್ದರು.
ಇನ್ನು ಅನೇಕ ಹೆಸರುಗಳು ಚರ್ಚೆಯಲ್ಲಿವೆ. ಅವುಗಳೆಂದರೆ:
Adv ಶ್ರೀಕಾಂತ್, ಎಂ ಟಿ ರಮೇಶ್, ಅಬ್ದುಲ್ಲ ಕುಟ್ಟಿ, ಏನ್ಮಾಕಜೆ ಸುಧೀರ್ ಶೆಟ್ಟಿ, ಸತಿಶ್ಚಂದ್ರ ಭಂಡಾರಿ, ರವೀಶ್ ತಂತ್ರಿ ಹೆಸರುಗಳು ಚಲಾವಣೆಯಲ್ಲಿ ಇವೆ.