Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೀನಿನ ಕಡಿತದಿಂದ ಜೀವವಿಪತ್ತು– ಮುಂಗೈ ಕತ್ತರಿಸಬೇಕಾದ ಭಯಾನಕ ಪರಿಸ್ಥಿತಿ

Spread the love

ಕಣ್ಣೂರು(ಕೇರಳ): ಮೀನು ಕಡಿತದಿಂದ ವ್ಯಕ್ತಿಯೋರ್ವನ ಬದುಕು ಆಘಾತಕಾರಿ ತಿರುವು ಪಡೆದು, ಆತ ಮುಂಗೈಯನ್ನೇ ಕಳೆದುಕೊಂಡು ಬದುಕು ಸಾಗಿಸುವಂಥ ದಯನೀಯ ದುಸ್ಥಿತಿ ಬಂದೊದಗಿದೆ.

ಕೇರಳದ ಥಲಸ್ಸೇರಿಯ ಮದಪೇಡಿಕಾ ಎಂಬಲ್ಲಿ ಹೈನುಗಾರಿಕೆ ನಡೆಸುತ್ತಿದ್ದ 38 ವರ್ಷದ ರಾಜೇಶ್​ ಎಂಬವರಿಗೆ ಮೀನು ಕಡಿದು ಉಂಟಾದ ಗಾಯದಿಂದಾಗಿ ದೇಹ ಹೊಕ್ಕ ಸೋಂಕಿನ ಪರಿಣಾಮ ಅವರ ಬಲ ಮುಂಗೈಯನ್ನೇ ಇದೀಗ ಕತ್ತರಿಸಲಾಗಿದೆ.

ಫೆ.10ರಂದು ತಮ್ಮ ತರಕಾರಿ ತೋಟದಲ್ಲಿ ನಿರ್ಮಿಸಿದ್ದ ಸಣ್ಣ ಕೊಳ ಶುಚಿಗೊಳಿಸುತ್ತಿದ್ದ ರಾಜೇಶ್​​ಗೆ ‘ಕಡು’ ಎಂಬ ಜಾತಿಯ ಮೀನು ಕಚ್ಚಿದೆ. ಇದರಿಂದ ಬೆರಳ ತುದಿಯಲ್ಲಿ ಸಣ್ಣ ಗಾಯವಾಗಿದೆ. ಆರಂಭದಲ್ಲಿ ನಿರ್ಲಕ್ಷಿಸಿದರೂ ದಿನವಿಡೀ ನೋವು ಉಂಟಾದ ಕಾರಣ ತಕ್ಷಣಕ್ಕೆ ಪಲ್ಲೂರ್​ನ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿ ಮಾಡಿದ್ದಾರೆ. ಚಿಕಿತ್ಸೆಯ ಬಳಿಕವೂ ನೋವು ಕಡಿಮೆಯಾಗಲಿಲ್ಲ. ಅಂಗೈವರೆಗೂ ಗುಳ್ಳೆಗಳು ಏಳಲು ಶುರುವಾಗಿದೆ.

ಇದರಿಂದ ಗಾಬರಿಗೊಂಡ ರಾಜೇಶ್​, ಮಾಹೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಅವರನ್ನು ಪರೀಕ್ಷಿಸಿದ ವೈದ್ಯರಿಗೆ ಸೋಂಕಿಗೆ ಕಾರಣವೇನು ಎಂಬುದನ್ನು ತಕ್ಷಣಕ್ಕೆ ತಿಳಿಯಲು ಸಾಧ್ಯವಾಗಲಿಲ್ಲ. ಇಲ್ಲೂ ಪರಿಹಾರ ಕಾಣದ ರಾಜೇಶ್, ಕೋಝಿಕ್ಕೋಡ್​ನ ಬೇಬಿ ಮೆಮೋರಿಯಲ್​ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದ ವೈದ್ಯರು, ಅಪರೂಪದ ಗ್ಯಾಸ್​ ಗ್ಯಾಂಗ್ರೀನ್​ ಆಗಿರುವುದನ್ನು ಪತ್ತೆ ಮಾಡಿದ್ದಾರೆ.

ಬಲು ಅಪರೂಪದ ಸೋಂಕು: ಕ್ಲೋಸ್ಟ್ರಿಡಿಯಲ್ ಮಯೋನೆಕ್ರೋಸಿಸ್ ಎಂದೂ ಕರೆಯಲ್ಪಡುವ ಗ್ಯಾಸ್ ಗ್ಯಾಂಗ್ರೀನ್, ಅಂಗಾಂಶಗಳನ್ನು ನಾಶಪಡಿಸುವ ಮತ್ತು ಅದರೊಳಗೆ ಅನಿಲವನ್ನು ಉತ್ಪಾದಿಸುವ ತೀವ್ರ ಮತ್ತು ಮಾರಣಾಂತಿಕ ಬ್ಯಾಕ್ಟೀರಿಯಾ ಆಗಿದೆ. ಕೆಸರು ಮತ್ತು ಮರಳಿನ ನೀರಿನಲ್ಲಿ ಕಂಡುಬರುವ ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಜನ್ಸ್ ಎಂಬ ಬ್ಯಾಕ್ಟೀರಿಯಾ ಇದಕ್ಕೆ ಕಾರಣವಾಗಿದೆ.

ಗ್ಯಾಂಗ್ರೀನ್​ನಿಂದಾಗಿ ಮೊದಲಿಗೆ ರಾಜೇಶ್‌ರ ಎರಡು ಬೆರಳುಗಳನ್ನು ಕತ್ತರಿಸಲಾಯಿತು. ಆದರೆ, ಅವರ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದೇ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಮುಂಗೈಯನ್ನು ಕತ್ತರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಸೋಂಕು ಅಂಗೈಗೆ ಹರಡಿ ಕ್ರಮೇಣ ಮಿದುಳನ್ನು ಹಾಳುಮಾಡುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಮುಂಗೈ ಕತ್ತರಿಸದೇ ಬೇರೆ ದಾರಿ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಈ ಅಪರೂಪದ ಸೋಂಕು ಇದುವರೆಗೂ ರಾಜ್ಯದಲ್ಲಿ ಇಬ್ಬರಲ್ಲಿ ಕಂಡುಬಂದಿದ್ದು, ಅದರಲ್ಲಿ ರಾಜೇಶ್​ ಒಬ್ಬರು. ಲಕ್ಷಕ್ಕೆ ಒಬ್ಬರಿಗೆ ಬರುವ ಸೋಂಕು ಇದಾಗಿದೆ. ಕೆಸರಿನ ನೀರಿನಲ್ಲಿರುವ ಗ್ಯಾಸ್​ ಗ್ಯಾಂಗ್ರೀನ್‌ನಲ್ಲಿರುವ ಬ್ಯಾಕ್ಟೀರಿಯಾದಿಂದ ಇಂಥ ಸೋಂಕು ಉಂಟಾಗುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕೋಝಿಕ್ಕೋಡ್​​ನ ಬೇಬಿ ಮೆಮೋರಿಯಲ್​ ಆಸ್ಪತ್ರೆಯ ಹಿರಿಯ ಕನ್ಸಲ್ಟಂಟ್​ ಡಾ.ಕೆ.ಎಸ್.ಕೃಷ್ಣಕುಮಾರ್​ ಸೋಂಕಿನ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ಕ್ಲೋಸ್ಟ್ರಿಡಿಯಲ್​ ಬ್ಯಾಕ್ಟೀರಿಯಾ ದೇಶವನ್ನು ಪ್ರವೇಶಿಸಿದ ಕಾರಣ ರಾಜೇಶ್​ ಅವರ ಮುಂಗೈ ಕತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದರು.

ಯಾವುದೇ ಅನೈರ್ಮಲ್ಯದ ಪರಿಸರದಲ್ಲಿ ಈ ಬ್ಯಾಕ್ಟೀರಿಯಾ ಕಂಡುಬರುತ್ತದೆ. ನಮ್ಮ ದೇಹ ಕೆಸರು ಅಥವಾ ಈ ರೀತಿ ಕಲುಷಿತದ ಸಂಪರ್ಕ ಪಡೆದಾಗ ಮಾತ್ರವೇ ಇದು ಅಪಾಯ ತರುತ್ತದೆ. ಆಳವಾದ ಗಾಯದ ಮೂಲಕ ದೇಹ ಪ್ರವೇಶಿಸುತ್ತದೆ. ಇದು ಆಮ್ಲಜನಕದ ಸಂಪರ್ಕವಿಲ್ಲದೇ ಜೀವಿಸುವ ಬ್ಯಾಕ್ಟೀರಿಯಾ ಆಗಿದ್ದು, ಅಲ್ಲಿನ ಜೀವಕೋಶವನ್ನು ತಿನ್ನುತ್ತದೆ. ಇದರ ಪರಿಣಾಮವಾಗಿ ದೇಹ ಪ್ರವೇಶಿಸಿದಾಗ ಆ ಪ್ರದೇಶ ಕೊಳೆಯಲಾರಂಬಿಸುತ್ತದೆ. ಇದನ್ನು ಗ್ಯಾಸ್​ ಗ್ಯಾಂಗ್ರೀನ್​ ಎನ್ನುತ್ತೇವೆ ಎಂದು ವಿವರಣೆ ನೀಡಿದರು.

ಮೀನಿನ ಮೂಳೆಯಿಂದಾಗಿ ರಾಜೇಶ್​ಗೆ ಗಾಯವಾಗಿದ್ದು, ಅದರ ಮೂಲಕ ಬ್ಯಾಕ್ಟೀರಿಯಾ ದೇಹ ಹೊಕ್ಕಿದೆ. ಮೀನಿನ ವಿಷವೂ ಕೂಡ ಹೆಚ್ಚಿನ ಅಲರ್ಜಿ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ. ಇದರಿಂದ ರಾಜೇಶ್​ ಅಂಗೈನಲ್ಲಿ ಸೇರಿದ್ದ ಬ್ಯಾಕ್ಟೀರಿಯಾದಿಂದ ಕೊಳೆತಿದೆ. ಕ್ಲೋಸ್ಟ್ರಿಡಿಯಲ್​ ಎದೆ ಅಥವಾ ಮಿದುಳಿಗೆ ಪಸರಿಸಿದ್ದಲ್ಲಿ ಮಾರಣಾಂತಿಕವಾಗುತ್ತದೆ. ಇದು ಹರಡದಂತೆ ತಡೆಯಲು ಇರುವ ಮಾರ್ಗ ಸೋಂಕಿತ ಪ್ರದೇಶವನ್ನು ಕತ್ತರಿಸಿ ಹಾಕುವುದಾಗಿದೆ.

ಈ ರೀತಿ ಯಾವುದಾದರೂ ಅನೈರ್ಮಲ್ಯ ಪರಿಸರದಲ್ಲಿ ಗಾಯವಾದರೆ, ಮೊದಲು ಆ ಗಾಯವನ್ನು ಆಮ್ಲಜನಕಕ್ಕೆ ಒಡ್ಡುವಂತೆ ಶುಚಿಗೊಳಿಸಬೇಕು. ಇದರಿಂದ ಬ್ಯಾಕ್ಟೀರಿಯಾಗಳು ಉಳಿಯುವುದಿಲ್ಲ. ಹಾಗೇ ತಕ್ಷಣಕ್ಕೆ ವೈದ್ಯಕೀಯ ಸಹಾಯವನ್ನು ಪಡೆಯಬೇಕು. ಈ ಕ್ಲೋಸ್ಟ್ರಿಡಿಯಲ್​ ಬ್ಯಾಕ್ಟೀರಿಯಾ ಒಬ್ಬರಿಂದ ಒಬ್ಬರಿಗೆ ಹರಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *