ಬಿಗ್ ಬಾಸ್ ಗಿಲ್ಲಿ ‘ಸೆಲ್ಫಿ ಕಿರಿಕ್’: ಸ್ಟಾರ್ ಆದ ಮೇಲೆ ಬದಲಾದರೇ ಹಳ್ಳಿ ಹುಡುಗ?

ಬಿಗ್ಬಾಸ್ 12ರ ವಿಜೇತ ಗಿಲ್ಲಿ ನಟ, ಸೆಲೆಬ್ರಿಟಿ ಆದ ಬಳಿಕ ಸರಣಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರಿಗೆ ಸೆಲ್ಫಿ ನೀಡುವಾಗ ಅಗೌರವ ತೋರಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಇದು ಸುದೀಪ್ ನೀಡಿದ್ದ ಎಚ್ಚರಿಕೆಯ ಮಾತನ್ನು ನೆನಪಿಸುತ್ತಿದೆ.

ಸೆಲೆಬ್ರಿಟಿ ಅಂದ್ರೆ ಸುಮ್ನೆನಾ?
ಸೆಲೆಬ್ರಿಟಿ ಆಗುವುದು ಎಷ್ಟು ಕಷ್ಟವೋ, ಅದಕ್ಕಿಂತಲೂ ಹೆಚ್ಚು ಕಷ್ಟ ಸಾಮಾನ್ಯ ವ್ಯಕ್ತಿಯೊಬ್ಬ ಸೆಲೆಬ್ರಿಟಿ ಪಟ್ಟಕ್ಕೆ ದಿಢೀರ್ ಏರಿದಾಗ ಅದನ್ನು ಮೆಂಟೇನ್ ಮಾಡುವುದು. ಇದೀಗ ಬಿಗ್ಬಾಸ್ನಲ್ಲಿ (Bigg Boss 12) ಐತಿಹಾಸಿಕ ಗೆಲುವು ಸಾಧಿಸಿರುವ ಗಿಲ್ಲಿ ನಟ (Gilli Nata) ಸ್ಥಿತಿಯೂ ಅದೇ ರೀತಿ ಆಗಿದೆ.
ಬೆಂಬಿಡದ ಆರೋಪ
ಆಗೊಬ್ಬ ಅಭಿಮಾನಿ ತನಗೆ ಸಿಗಲು ಬರಲಿಲ್ಲ ಎಂದು ಮಾಧ್ಯಮಗಳ ಮುಂದೆ ಆರೋಪ ಮಾಡಿದ್ರೆ, ಇನ್ನೊಬ್ಬರು ಸಿನಿಮಾ ಪ್ರಚಾರಕ್ಕೆ ಬರಲಿಲ್ಲವೆಂದು ದೂರನ್ನೇ ದಾಖಲು ಮಾಡಿದ್ರು. ಈಗ ನೋಡಿದ್ದರೆ ಪೊಲೀಸರೊಬ್ಬರು ಸೆಲ್ಫಿ ಕೇಳಿದಾಗ ಗಿಲ್ಲಿ ನಟ ತಾತ್ಸಾರ ಮಾಡಿದರು ಎನ್ನುವ ಆರೋಪ ಕೇಳಿಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅದರ ವಿಡಿಯೋ ವೈರಲ್ ಆಗ್ತಿದೆ.
ಪೊಲೀಸರ ಸೆಲ್ಫಿ
ಅಷ್ಟಕ್ಕೂ ಈ ವಿಡಿಯೋದಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಜೊತೆ ಮಾತನಾಡುತ್ತಿರುವಾಗ ಅಲ್ಲಿರುವ ಪೊಲೀಸರೊಬ್ಬರು ಸೆಲ್ಫಿ ಕೇಳಿದ್ದಾರೆ. ಗಿಲ್ಲಿ ನಟ, ಸೆಲ್ಫಿ ಕೊಡಲ್ಲ ಅಂತೇನೂ ಹೇಳಲಿಲ್ಲ. ಸಹಜವಾಗಿಯೇ ಫೋನ್ ತೆಗೆದುಕೊಂಡು ಸೆಲ್ಫಿ ಕೊಟ್ಟಿದ್ದಾರೆ. ಆದರೆ ಅಪ್ಪನ ವಯಸ್ಸಿನ ಪೊಲೀಸರಿಗೆ ಗಿಲ್ಲಿ ನಟ ರಿಸ್ಪೆಕ್ಟ್ ಕೊಟ್ಟಿಲ್ಲ. ಇದೇನಾ ಕರ್ನಾಟಕ ಇಷ್ಟಪಟ್ಟ ಗಿಲ್ಲಿ? ಎಂದು ಶೀರ್ಷಿಕೆ ಕೊಟ್ಟು justwowkarnataka_motivation ಎನ್ನುವ ಇನ್ಸ್ಟಾದಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಪೊಲೀಸರಿಗೆ ಗಿಲ್ಲಿ ನಟ ಗೌರವ ಕೊಟ್ಟಿಲ್ಲ ಎಂದು ಎಲ್ಲಿ ಕಾಣಿಸುತ್ತಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಆದರೆ ಕೆಲವು ಅಭಿಮಾನಿಗಳ ಕಣ್ಣಿಗೆ ಅದು ಹಾಗೆ ಕಂಡಿದೆ!
ಹೆಜ್ಜೆ ಹೆಜ್ಜೆಗೂ ತಪ್ಪು!
ಸುಮಾರು 50 ಕೋಟಿ ಮತ ಚಲಾಯಿಸಿದ ಅಭಿಮಾನಿಗಳು ಗಿಲ್ಲಿ ನಟ ತಾವು ಹೇಳಿದಂತೆ ಕೇಳಬೇಕು, ತಾವು ಹೇಳಿದಂತೆ ನಡೆದುಕೊಳ್ಳಬೇಕು. ತಮ್ಮನ್ನೂ ಭೇಟಿಯಾಗಬೇಕು ಎನ್ನೋದನ್ನು ಆಶಿಸುವುದರಲ್ಲಿ ತಪ್ಪೇನಿಲ್ಲ. ಹಾಗೆಂದು ಇದೀಗ ಸೆಲೆಬ್ರಿಟಿ ಆಗಿರೋ ತಪ್ಪಿಗೆ ಹೆಜ್ಜೆ ಹೆಜ್ಜೆಗೂ ಹುಳುಕನ್ನೇ ಹುಡುಕುವ ಕೆಲಸ ಮಾಡಲಾಗುತ್ತಿದೆ ಎಂದು ಕೆಲವರು ಕಮೆಂಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುದೀಪ್ ಹೇಳಿದ್ದೇನು?
ಇದೇ ಕಾರಣಕ್ಕೆ ತಾನೆ ಸುದೀಪ್ ಗಿಲ್ಲಿ ನಟನಿಗೆ ಒಂದು ಮಾತು ಹೇಳಿದ್ದು. ಅದೇನೆಂದರೆ, ಇಲ್ಲಿಯವರೆಗಿನದ್ದು ಒಂದು ಮಾತು, ಮುಂದಿನದ್ದು ಇನ್ನೊಂದು ಮಾತು ಎಂದಿದ್ದರು. ಜತೆಗೆ, ನೋಡಿಕೊಂಡು ಹೆಜ್ಜೆ ಇಡ್ರಿ, ಯಾವುದನ್ನೂ ತಲೆಗೆ ತೆಗೆದುಕೊಳ್ಳಬೇಡಿ ಗಿಲ್ಲಿ, ಎಲ್ಲವನ್ನೂ ಬ್ಯಾಲೆನ್ಸ್ ಮಾಡಿʼ ಎಂದು ಕೂಡ ಹೇಳಿದ್ದರು. ಈ ಮಾತುಗಳು ಮುಂದೆ ಆಗಬಹುದಾದ ಆರೋಪಗಳ ಅನಾಹುತಗಳನ್ನು ಸೂಚ್ಯವಾಗಿ ಹೇಳುವಂತಿತ್ತು.
ಸಾಮಾನ್ಯ ಮನುಷ್ಯನಲ್ಲ
ಏಕೆಂದರೆ ಇನ್ನು ಮುಂದೆ ಗಿಲ್ಲಿ ನಟ ಸಾಮಾನ್ಯ ಮನುಷ್ಯನಲ್ಲ. ಅವರ ಅಭಿಮಾನಿಗಳು ಹೇಳಿದಂತೆ ಕೇಳಬೇಕು, ಎಲ್ಲರನ್ನೂ ಬ್ಯಾಲೆನ್ಸ್ ಮಾಡಬೇಕು. ಹೋದಲ್ಲಿ, ಬಂದಲ್ಲಿ ಒಂದಷ್ಟು ತಿಂಗಳಾದರೂ ಕ್ಯಾಮೆರಾ ಕಣ್ಣುಗಳ ನೆಟ್ಟಿರುತ್ತವೆ. ಸಿನಿಮಾ ಸೆಲೆಬ್ರಿಟಿಗಳ ರೀತಿ ಯಾವಾಗಲೂ ಅಲ್ಲದಿದ್ದರೂ ಬಿಗ್ಬಾಸ್ 12ರ ಹವಾ ಮುಗಿಯುವವರೆಗಾದರೂ ಎಚ್ಚರದಿಂದ ಹೆಜ್ಜೆ ಇಡಬೇಕು ಎನ್ನುವುದನ್ನೇ ಸುದೀಪ್ ಸೂಕ್ಷ್ಮವಾಗಿ ವಿವರಿಸಿದ್ದಂತಿದೆ.