ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕಿಯ ಗುಪ್ತಾಂಗಕ್ಕೆ ಬರೆ ಹಾಕಿದ ಮಲತಾಯಿ

ಚಿಕ್ಕಮ್ಮ, ಚಿಕ್ಕಮ್ಮನೇ ಹೊರತು ಆಕೆ ಎಂದಿಗೂ ತಾಯಿ ಆಗೋಕೆ ಸಾಧ್ಯನೇ ಇಲ್ಲ ಅಂತ ಹಿರಿಯರು ಹೇಳ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಇಲ್ಲೊಬ್ಬಳು ಮಲತಾಯಿ ಪುಟ್ಟ ಕಂದಮ್ಮನ ಪಾಲಿಗೆ ಚಿಕ್ಕಮ್ಮ ಆಗಿಲ್ಲ, ಬದಲಾಗಿ ರಾಕ್ಷಸಿಯಾಗಿ ಬಿಟ್ಟಿದ್ದಾಳೆ. 5 ವರ್ಷದ ಪುಟ್ಟ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾಳೆ.

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ (Urinate) ಮಾಡಿದ್ದಕ್ಕೆ ಮಲತಾಯಿ ಪುಟ್ಟ ಬಾಲಕಿಯ ಗುಪ್ತಾಂಗಕ್ಕೆ (Private Part) ಬರೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.
ಕೇರಳದ ಕಾಂಜಿಕೋಡ್ ಬಳಿ ಈ ಅಮಾನವೀಯ ಘಟನೆ ನಡೆದಿದೆ. 5 ವರ್ಷದ ಪುಟ್ಟ ಮಗು ಅಂಗನವಾಡಿಯಲ್ಲಿ ಕುಳಿತುಕೊಳ್ಳಲು ಕಷ್ಟಪಡುತ್ತಿರುವುದನ್ನ ಗಮನಿಸಿದ ಶಿಕ್ಷಕಿ, ಏನಾಯ್ತು ಎಂದು ಕೇಳಿದ್ದಾರೆ. ಆಗ ಆ ಬಾಲಕಿ ತನ್ನ ಮಲತಾಯಿಯ ರಾಕ್ಷಸಿ ಕೃತ್ಯವನ್ನ ಬಿಚ್ಚಿಟ್ಟಿದ್ದಾಳೆ. ಕಳೆದ ವಾರ ನಡೆದಿರುವ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಪೊಲೀಸರು ಮಲತಾಯಿಯನ್ನ ಬಂಧಿಸಿದ್ದಾರೆ.
ಒಂದೇ ಒಂದು ಪುಟ್ಟ ತಪ್ಪಿಗೆ ಯಾಕಿಷ್ಟು ಕ್ರೂರ ಶಿಕ್ಷೆ?
ಕಳೆದ ವಾರ ಪುಟ್ಟ ಬಾಲಕಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಇದರಿಂದ ಮಗುವಿನ ಮೇಲೆ ಕೋಪಗೊಂಡ ಮಲತಾಯಿ ಮಾಡಬಾರದ ಕೆಲಸ ಮಾಡಿದ್ದಾಳೆ. ಕಬ್ಬಿಣದ ಸೌಟನ್ನು ಬೆಂಕಿಯಲ್ಲಿ ಕಾಯಿಸಿ 5 ವರ್ಷದ ಪುಟ್ಟ ಬಾಲಕಿಯ ಗುಪ್ತಾಂಗಕ್ಕೆ ಬರೆ ಹಾಕಿ ಕ್ರೌರ್ಯ ಮೆರೆದಿದ್ದಾಳೆ. ಈ ಘಟನೆಯನ್ನ ಯಾರ ಬಳಿಯೂ ಹೇಳಿಕೊಳ್ಳಲಾಗದೇ ಆ ಪುಟ್ಟ ಮಗು ನರಕಯಾತನೆ ಅನುಭವಿಸಿದೆ.
ಅಂಗನವಾಡಿಯಲ್ಲಿ ಮಗು ಕುಳಿತುಕೊಳ್ಳಲು ಕಷ್ಟಪಡುವುದನ್ನ ಗಮನಿಸಿದ ಅಂಗನವಾಡಿ ಶಿಕ್ಷಕಿ ಮಗುವಿನ ಬಳಿ ಏನಾಯಿತು ಎಂದು ಕೇಳಿದ್ದಾರೆ. ಆಗ ಮಗು ತನಗಾದ ನೋವಿನ ಬಗ್ಗೆ ಹೇಳಿದ್ದು, ತಕ್ಷಣವೇ ಅಂಗನವಾಡಿ ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ, ಅಂಗನವಾಡಿ ಶಿಕ್ಷಕಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ರಾಕ್ಷಸಿ ಕೃತ್ಯ ಎಸಗಿದ ತಾಯಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ಮಗು ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಯಲ್ಲಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಾಲಕಿಯ ತಂದೆ ನೇಪಾಳದ ಪ್ರಜೆಯಾಗಿದ್ದು, ಬಿಹಾರ ಮೂಲದ ಮಹಿಳೆಯನ್ನ ಎರಡನೇ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಇನ್ನು, ಇದಕ್ಕೂ ಮುಂಚೆ ಕೂಡ ಮಲತಾಯಿ ಇದೇ ರೀತಿ ಹಲ್ಲೆ ಮಾಡಿದ್ದಳು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.