ಜಾತಿ ಕಾರಣಕ್ಕೆ ಮದುವೆ ನಿರಾಕರಣೆ: ಸಿದ್ದಿಪೇಟೆ ವೈದ್ಯಕೀಯ ಕಾಲೇಜಿನ ಮಹಿಳಾ ವೈದ್ಯೆಯ ಬಲಿ!

ಹೈದರಾಬಾದ್: ತನ್ನ ಕನಸಿನ ವೈದ್ಯಕೀಯ ವೃತ್ತಿಯಲ್ಲಿ ಸಾಧನೆ ಮಾಡಿ ಬಡತನದಿಂದ ಕುಟುಂಬವನ್ನು ಮೇಲೆತ್ತಬೇಕೆಂಬ ಛಲ ಹೊಂದಿದ್ದ 23 ವರ್ಷದ ಪ್ರತಿಭಾವಂತ ವೈದ್ಯೆ ಬಿ. ಲಾವಣ್ಯ ಅವರ ಬದುಕು ಜಾತಿ ವ್ಯವಸ್ಥೆಯ ಕರಾಳತೆಗೆ ಬಲಿಯಾಗಿದೆ. ಸಿದ್ದಿಪೇಟೆ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹೌಸ್ ಸರ್ಜನ್ (ಇಂಟರ್ನ್‌ಶಿಪ್) ಆಗಿ ಕೆಲಸ ಮಾಡುತ್ತಿದ್ದ ಲಾವಣ್ಯ ಅವರಿಗೆ, ಅದೇ ಕಾಲೇಜಿನಲ್ಲಿ ಸಹೋದ್ಯೋಗಿಯಾಗಿದ್ದ ಪ್ರಣಯ್ ತೇಜ ಎಂಬ ವೈದ್ಯನ ಪರಿಚಯವಾಗಿ ಪ್ರೇಮಾಂಕುರವಾಗಿತ್ತು.


ಕಳೆದ ಒಂದು ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದು, ಮದುವೆಯಾಗುವ ಭರವಸೆಯನ್ನು ಆರೋಪಿ ನೀಡಿದ್ದ. ಆದರೆ ಲಾವಣ್ಯ ಅವರು ದಲಿತ ಸಮುದಾಯಕ್ಕೆ ಸೇರಿರುವ ವಿಷಯ ತಿಳಿದಾಗ, ಜಾತಿ ವ್ಯತ್ಯಾಸದ ನೆಪವೊಡ್ಡಿ ಆತ ಮದುವೆಯಾಗಲು ಹಠಾತ್ ನಿರಾಕರಿಸಿದನು. ಪ್ರೀತಿಯಲ್ಲಿನ ಈ ವಂಚನೆ ಹಾಗೂ ಜಾತಿ ಆಧಾರಿತ ತಿರಸ್ಕಾರದಿಂದ ತೀವ್ರವಾಗಿ ಮನನೊಂದ ಲಾವಣ್ಯ ಅವರು ಜನವರಿ 3ರಂದು ಕಾಲೇಜಿನ ಹಾಸ್ಟೆಲ್ ಕೊಠಡಿಯಲ್ಲಿ ವಿಷ ಸೇವಿಸಿದ್ದರು.

ಕೂಡಲೇ ಆಕೆಯನ್ನು ಹೈದರಾಬಾದ್‌ನ ನಿಮ್ಸ್ (NIMS) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಜನವರಿ 4ರಂದು ಮುಂಜಾನೆ ಕೊನೆಯುಸಿರೆಳೆದರು. ಜೋಗುಳಂಬ-ಗಡ್ವಾಲ್ ಜಿಲ್ಲೆಯ ಬಡ ಕೂಲಿ ಕಾರ್ಮಿಕರ ಮಗಳಾಗಿದ್ದ ಲಾವಣ್ಯ ಅವರು ಕ್ರೀಡೆ ಮತ್ತು ಶಿಕ್ಷಣ ಎರಡರಲ್ಲೂ ಮುಂಚೂಣಿಯಲ್ಲಿದ್ದು, ಸಾಧನೆಯ ಹಾದಿಯಲ್ಲಿದ್ದರು. ಈ ಸಂಬಂಧ ಲಾವಣ್ಯ ಅವರ ಕುಟುಂಬ ನೀಡಿದ ದೂರಿನ ಮೇರೆಗೆ ಸಿದ್ದಿಪೇಟೆ ಪೊಲೀಸರು ಆರೋಪಿ ಪ್ರಣಯ್ ತೇಜ ವಿರುದ್ಧ ಬಿಎನ್ಎಸ್ (BNS) ಮತ್ತು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
