ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು: 21 ಎಕರೆ ಸರ್ಕಾರಿ ಜಮೀನು ಕಬಳಿಕೆ ಆರೋಪ; ಬಿಜೆಪಿ ಆಕ್ರೋಶ!

ಕೋಲಾರ: ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಮ್ಮ ಹುಟ್ಟೂರಾದ ಕೋಲಾರ ತಾಲೂಕಿನ ನರಸಪುರ ಹೋಬಳಿಯ ಗರುಡನಪಾಳ್ಯದಲ್ಲಿ ಸುಮಾರು 21 ಎಕರೆ ಸರ್ಕಾರಿ ಖರಾಬು ಜಮೀನನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಲೋಕಾಯುಕ್ತಕ್ಕೆ ಅಧಿಕೃತ ದೂರು ನೀಡಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ಸಲ್ಲಿಕೆಯಾಗಿರುವ ಈ ದೂರಿನಲ್ಲಿ, ಸರ್ವೆ ನಂಬರ್ 46 ಮತ್ತು 47 ರಲ್ಲಿನ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಚಿವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಗಂಭೀರವಾಗಿ ಹಜೇರುಪಡಿಸಲಾಗಿದೆ.


2025ರ ಡಿಸೆಂಬರ್ 17ರಂದು ಬಿಜೆಪಿ ಮುಖಂಡ ತಮ್ಮೇಶ ಗೌಡ ಅವರು ಈ ಕುರಿತಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಸರ್ಕಾರಿ ಭೂಮಿ ಉಳಿಸಬೇಕಾದ ಸಚಿವರೇ ಫೋರ್ಜರಿ ದಾಖಲೆಗಳ ಮೂಲಕ ಭೂಹಗರಣದಲ್ಲಿ ಭಾಗಿಯಾಗಿದ್ದಾರೆ, ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಸಚಿವ ಕೃಷ್ಣಭೈರೇಗೌಡ, “ಅದು ನಮ್ಮ ತಾತನ ಕಾಲದ ಆಸ್ತಿಯಾಗಿದ್ದು, ಪಾಲಿನ ಮೂಲಕ ನಮಗೆ ಬಂದಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ರಾಜಕೀಯ ದ್ವೇಷಕ್ಕಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದ್ದು, ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ನನ್ನ ಸಹಮತವಿದೆ ಎಂದು ಸಚಿವರು ಸವಾಲು ಹಾಕಿದ್ದಾರೆ. ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುವ ಅವರು, ಬಿಜೆಪಿ ನಾಯಕರು ಕೇವಲ ಕೆಸರೆರಚಾಟ ನಡೆಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಸದ್ಯ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿರುವುದರಿಂದ ಈ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
