ಇಂದೋರ್ನಲ್ಲಿ ಕಲುಷಿತ ನೀರಿನ ಮರಣಮೃದಂಗ: 30 ವರ್ಷಗಳ ಹಿಂದಿನ ‘ಅಸ್ಥಿಪಂಜರ’ದ ಭೀತಿ ನೆನಪಿಸಿದ ಭಗೀರಥಪುರ ದುರಂತ!

ಇಂದೋರ್: ಮಧ್ಯಪ್ರದೇಶದ ಇಂದೋರ್ನ ಭಗೀರಥಪುರದಲ್ಲಿ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣವಾಗಿ ಉಂಟಾಗಿರುವ ಸಾಂಕ್ರಾಮಿಕ ರೋಗದ ಭೀತಿ ಹಳೆಯದೊಂದು ಭೀಕರ ಘಟನೆಯನ್ನು ಮೆಲುಕು ಹಾಕುವಂತೆ ಮಾಡಿದೆ. ಸುಮಾರು 30 ವರ್ಷಗಳ ಹಿಂದೆ ಸುಭಾಷ್ ಚೌಕ್ ಟ್ಯಾಂಕ್ನಲ್ಲಿ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿದ್ದು, ಸಾವಿರಾರು ಜನರು ಅದೇ ಕೊಳೆತ ಶವವಿದ್ದ ನೀರನ್ನು ಕುಡಿದು ಆಸ್ಪತ್ರೆ ಪಾಲಾಗಿದ್ದರು. ಇಂದು ಭಗೀರಥಪುರದಲ್ಲಿ ಪರಿಸ್ಥಿತಿ ಅಷ್ಟೇ ಗಂಭೀರವಾಗಿದ್ದು, ಕಲುಷಿತ ನೀರಿನಿಂದಾಗಿ ಈವರೆಗೆ ಸುಮಾರು 142 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಈ ಪೈಕಿ 11 ಮಂದಿ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.


ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಆರು ತಿಂಗಳ ಮಗು ಸೇರಿದಂತೆ ಸುಮಾರು 16 ಜನರು ಬಲಿಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಆರೋಗ್ಯ ತಂಡಗಳು 2,300ಕ್ಕೂ ಹೆಚ್ಚು ಮನೆಗಳನ್ನು ಸಮೀಕ್ಷೆ ನಡೆಸಿದ್ದು, ಒಟ್ಟು 398 ರೋಗಿಗಳು ಈ ಕಲುಷಿತ ನೀರಿನ ಬಾಧೆಗೆ ಒಳಗಾಗಿರುವುದು ದೃಢಪಟ್ಟಿದೆ.

ಸೋಂಕಿನ ನಿಖರ ಮೂಲವನ್ನು ಪತ್ತೆಹಚ್ಚಲು ಕೋಲ್ಕತ್ತಾದ ರಾಷ್ಟ್ರೀಯ ಬ್ಯಾಕ್ಟೀರಿಯಾ ಸೋಂಕು ಸಂಶೋಧನಾ ಸಂಸ್ಥೆಯ (NIRBI) ತಜ್ಞರ ತಂಡ ಈಗ ಇಂದೋರ್ಗೆ ಆಗಮಿಸಿದ್ದು, ತನಿಖೆ ಕೈಗೊಂಡಿದೆ. ದಶಕಗಳ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ನಡೆದ ಅಸ್ಥಿಪಂಜರ ಪತ್ತೆಯಾದ ಘಟನೆಯ ಕರಾಳ ನೆರಳು ಈಗ ಮತ್ತೆ ಇಂದೋರ್ ನಿವಾಸಿಗಳನ್ನು ಆವರಿಸಿದೆ.
