ರಸ್ತೆ ಗುಂಡಿ ತಂದ ಅನಾಹುತ: ಅಪಘಾತ ತಪ್ಪಿಸಲು ಹೋಗಿ ಬೈಕ್ನಿಂದ ಬಿದ್ದು ಸವಾರನಿಗೆ ಗಂಭೀರ ಗಾಯ

ಬೆಂಗಳೂರು ಹೊರವಲಯದ ನೆಲಮಂಗಲದ ಸುಭಾಷ್ ನಗರದಲ್ಲಿ ರಸ್ತೆ ಗುಂಡಿಯಿಂದಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ತಬ್ರೇಜ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.


ಸುಭಾಷ್ ನಗರದ ಬಜಾಜ್ ಶೋ ರೂಮ್ ಬಳಿ ಪೈಪ್ಲೈನ್ ಕಾಮಗಾರಿಗಾಗಿ ಅಗೆದಿದ್ದ ಗುಂಡಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಮುಚ್ಚದ ಕಾರಣ ಈ ಅವಘಡ ಸಂಭವಿಸಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಮುಂದಿನ ಬೈಕ್ ಸವಾರ ಗುಂಡಿಯನ್ನು ಕಂಡು ಏಕಾಏಕಿ ಬ್ರೇಕ್ ಹಾಕಿದಾಗ, ಹಿಂದಿನಿಂದ ಬರುತ್ತಿದ್ದ ತಬ್ರೇಜ್ ಡಿಕ್ಕಿಯನ್ನು ತಪ್ಪಿಸಲು ಯತ್ನಿಸಿ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾರೆ.

ಇಸ್ಲಾಂಪುರ ನಿವಾಸಿಯಾದ ತಬ್ರೇಜ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಅಪಘಾತದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೈಪ್ಲೈನ್ ಅಗೆದು ರಸ್ತೆಯನ್ನು ದುರಸ್ತಿ ಮಾಡದ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
