ಹೊಸ ಪಡಿತರ ಚೀಟಿ ಆಕಾಂಕ್ಷಿಗಳಿಗೆ ಸಚಿವ ಕೆ.ಎಚ್. ಮುನಿಯಪ್ಪ ಗುಡ್‌ನ್ಯೂಸ್: ಮುಂದಿನ ಒಂದೂವರೆ ತಿಂಗಳೊಳಗೆ 2.95 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ

ಬೆಳಗಾವಿ : ಸುವರ್ಣ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು, ಹೊಸ ಬಿಪಿಎಲ್ (BPL) ಕಾರ್ಡ್‌ಗಾಗಿ ಕಾಯುತ್ತಿದ್ದ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿದ್ದ ಒಟ್ಟು 3.96 ಲಕ್ಷ ಅರ್ಜಿಗಳ ಪೈಕಿ, ಅರ್ಹತಾ ಮಾನದಂಡಗಳನ್ನು ಪೂರೈಸಿದ 2.95 ಲಕ್ಷ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದ್ದು, ಮುಂದಿನ ಒಂದೂವರೆ ತಿಂಗಳೊಳಗೆ ಈ ಎಲ್ಲಾ ಅರ್ಹ ಫಲಾನುಭವಿಗಳಿಗೆ ಹೊಸ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆಹಚ್ಚಿ ಅವುಗಳನ್ನು ಎಪಿಎಲ್ (APL) ಕಾರ್ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಸರ್ಕಾರ ಚುರುಕುಗೊಳಿಸಿದ್ದು, ಇದರಿಂದ ಅರ್ಹ ಬಡವರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ತಲುಪುವಂತಾಗಲಿದೆ. ಇನ್ನು ಪಡಿತರ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಈ ತಿಂಗಳ ಅಂತ್ಯದೊಳಗೆ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಹೊಸ ಒಳ ಮೀಸಲಾತಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 3,517 ಜನರಿಗೆ ಈ ಅಂಗಡಿಗಳ ಪರವಾನಗಿ ಸಿಗಲಿದೆ.


ಇದಲ್ಲದೆ, ರೈತರ ಹಿತದೃಷ್ಟಿಯಿಂದ ಈ ಬಾರಿ ರಾಜ್ಯದಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಮತ್ತು 3 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಈಗಾಗಲೇ ಸುಮಾರು 2.57 ಲಕ್ಷ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಜೋಳ ಖರೀದಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿಯ ಸ್ಥಿತಿಗತಿ ಬಗ್ಗೆ ತಿಳಿಯಲು ಆಯಾ ಜಿಲ್ಲಾ ಕೇಂದ್ರ ಅಥವಾ ನಗರ ವ್ಯಾಪ್ತಿಯ ಆಹಾರ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸೂಚಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದಾಗಿ ಲಕ್ಷಾಂತರ ಬಡ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳು ದೊರೆಯಲಿವೆ ಮತ್ತು ರೈತರಿಗೂ ತಮ್ಮ ಬೆಲೆಗೆ ಯೋಗ್ಯ ಬೆಲೆ ಸಿಗುವಂತಾಗಲಿದೆ

