ಕರ್ನಾಟಕ ಟೆಂಪಲ್ ಅಕಮಡೇಶನ್’ ನಕಲಿ ಸೈಟ್ ಸೃಷ್ಟಿ; QR ಕೋಡ್ ಮೂಲಕ ಹಣ ಕಸಿದು ವಂಚಕರು ಪರಾರಿ.

ಉಡುಪಿ: ರಾಜ್ಯದ ಪ್ರಸಿದ್ಧ ಹಾಗೂ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ಸೈಬರ್ ಕಳ್ಳರು ನಕಲಿ ವೆಬ್ಸೈಟ್ ತೆರೆದು ಭಕ್ತರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಭಕ್ತರು ದೇವಾಲಯದ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಲು ಬಳಸುವ ಅಧಿಕೃತ ವೆಬ್ಸೈಟ್ಗೆ ಹೋಲಿಕೆಯ ನಕಲಿ ಸೈಟ್ ತೆರೆಯಲ್ಪಟ್ಟಿದ್ದು, ಮುಂಗಡ ಬುಕಿಂಗ್ ಹೆಸರಿನಲ್ಲಿ ಹಣ ಕಸಿಕೊಳ್ಳಲಾಗುತ್ತಿದೆ.

“ಕರ್ನಾಟಕ ಟೆಂಪಲ್ ಅಕಮಡೇಶನ್” ಎಂಬ ಹೆಸರಿನಲ್ಲಿ ಸೈಬರ್ ಅಪರಾಧಿಗಳು ನಕಲಿ ವೆಬ್ಸೈಟ್ ನಿರ್ಮಿಸಿದ್ದು, ಅದರಲ್ಲಿ QR ಕೋಡ್ ಮತ್ತು ಫೋನ್ಪೇ ಪಾವತಿ ಆಯ್ಕೆಗಳು ಸೇರಿಸಲಾಗಿದೆ. ವಾಟ್ಸಾಪ್ ಮೂಲಕ ಭಕ್ತರಿಗೆ ಈ ಲಿಂಕ್ ಕಳುಹಿಸಿ, ಯುಪಿಐ ಪಾವತಿಗೆ ಪ್ರೇರೇಪಿಸಿ ನಕಲಿ ರಶೀದಿಗಳನ್ನು ನೀಡಲಾಗುತ್ತಿತ್ತು. ಆದರೆ ಭಕ್ತರು ಕೊಲ್ಲೂರಿಗೆ ಬಂದಾಗ ನೋಂದಣಿ ದಾಖಲೆ ಸಿಗದೆ ಸಂಕಷ್ಟಕ್ಕೀಡಾಗಿದ್ದರಿಂದ ವಂಚನೆ ಬಯಲಿಗೆ ಬಂದಿದೆ.ಘಟನೆ ಕುರಿತು ದೇವಾಲಯದ ಆಡಳಿತಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಾಲಯದ ಪಕ್ಕದಲ್ಲಿರುವ ಲಲಿತಾಂಬಿಕಾ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸುವ ಹೆಸರಿನಲ್ಲಿ ಈ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ದೇವಾಲಯದ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳು ಹೇಳುವಂತೆ,“ರಾಜ್ಯದ ಎ-ಗ್ರೇಡ್ ದೇವಾಲಯಗಳಿಗೆ ಸರ್ಕಾರದಿಂದಲೇ ಅಧಿಕೃತ ವೆಬ್ಸೈಟ್ ಇದೆ. ಅದು ‘ಕರ್ನಾಟಕ ಟೆಂಪಲ್ಸ್ ಅಕಮಡೇಶನ್’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸೈಟ್ನಲ್ಲಿ ಯಾವುದೇ QR ಕೋಡ್ ಪಾವತಿ ವ್ಯವಸ್ಥೆ ಇಲ್ಲ. ಭಕ್ತರು ನಕಲಿ ಲಿಂಕ್ಗಳಿಗೆ ಹೋಗದೆ ಅಧಿಕೃತ ಸರ್ಕಾರಿ ಸೈಟ್ನಿಂದ ಮಾತ್ರ ಬುಕಿಂಗ್ ಮಾಡಬೇಕು,” ಎಂದು ಎಚ್ಚರಿಕೆ ನೀಡಲಾಗಿದೆ.ಗಮನಾರ್ಹವಾಗಿ, ಇದೇ ರೀತಿಯ ವಂಚನೆ 2024ರ ಫೆಬ್ರವರಿ ತಿಂಗಳಲ್ಲಿಯೂ ನಡೆದಿತ್ತು. ಆಗ “Kollur Devotees Trust” ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಲಿಂಕ್ ಹಂಚಲಾಗಿತ್ತು. ಈಗ ಮತ್ತೆ ಇದೇ ರೀತಿಯ ಘಟನೆ ಸಂಭವಿಸಿರುವುದರಿಂದ ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತರು ಸರ್ಕಾರ ಮತ್ತು ಪೊಲೀಸರ ತ್ವರಿತ ಕ್ರಮವನ್ನು ಆಗ್ರಹಿಸಿದ್ದಾರೆ.ಭಕ್ತರಿಗೆ ಈಗ ಮೂಕಾಂಬಿಕಾ ದೇವಾಲಯಕ್ಕೆ ಸಂಬಂಧಿಸಿದ ಯಾವುದೇ ಆನ್ಲೈನ್ ಬುಕ್ಕಿಂಗ್ ಮಾಡುವಾಗ ಅಧಿಕೃತ ಸರ್ಕಾರಿ ವೆಬ್ಸೈಟ್ನಿಂದ ಮಾತ್ರ ಸೇವೆ ಪಡೆಯಲು ವಿನಂತಿಸಲಾಗಿದೆ.