ನಾವು ಪರಮಾಣು ಪರೀಕ್ಷೆ ನಡೆಸುತ್ತೇವೆ: ಪಾಕಿಸ್ತಾನ, ಚೀನಾ ವಿರುದ್ಧ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: ಪಾಕಿಸ್ತಾನ (Pakistan), ಚೀನಾ, ರಷ್ಯಾ, ಉತ್ತರ ಕೊರಿಯಾ ದೇಶಗಳು ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ. ಹೀಗಿರುವಾಗ ಅಮೆರಿಕ ಮಾತ್ರ ಸಂಯಮ ತೋರಿಸುವ ದೇಶವಾಗಿ ಉಳಿಯಲು ಸಾಧ್ಯವಿಲ್ಲ. ನಾವೂ ಪರಮಾಣು ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ರಂಪ್, ವಿಶ್ವದಾದ್ಯಂತ ಅನೇಕ ದೇಶಗಳು ಪರಮಾಣು ಬಾಂಬ್‌ಗಳನ್ನ ಪರೀಕ್ಷಿಸುತ್ತಿವೆ (Nuclear Testing). ರಷ್ಯಾ, ಚೀನಾ, ಉತ್ತರ ಕೊರಿಯಾ, ಪಾಕಿಸ್ತಾನ ಕೂಡ ಈ ಕೆಲಸದಲ್ಲಿ ನಿರತವಾಗಿವೆ. ಆದ್ರೆ ಯಾರೂ ಅದರ ಬಗ್ಗೆ ಮಾತನಾಡ್ತಿಲ್ಲ. ಆದ್ರೆ ನಮ್ಮದು ಮುಕ್ತ ಸಮಾಜ, ಎಲ್ಲವನ್ನೂ ಮಾತನಾಡ್ತೀವಿ. ಇಲ್ಲದಿದ್ರೆ ನೀವು ನಾಳೆ ಹೇಳಿದ್ದನ್ನೂ ಮೀರಿ ವರದಿ ಮಾಡ್ತೀರಿ ಎಂದು ಪತ್ರಕರ್ತರಿಗೆ ಹೇಳಿದ್ದಾರೆ.
ಅವರೆಲ್ಲರೂ ನ್ಯೂಕ್ಲಿಯರ್ ಪರೀಕ್ಷೆ ನಡೆಸುತ್ತಿವೆ. ಆದ್ರೆ ಇತರ ಎಲ್ಲಾ ದೇಶಗಳಿಗಿಂತ ಅಮೆರಿಕ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿದೆ. ಇಡೀ ಜಗತ್ತನ್ನು 150 ಬಾರಿ ಸ್ಫೋಟಿಸುವಷ್ಟು ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ನಾವು ಹೊಂದಿದ್ದೇವೆ. ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಇಬ್ಬರೊಂದಿಗೂ ಈ ವಿಷಯ ಚರ್ಚಿಸಿದ್ದೇನೆ. ಆದಾಗ್ಯೂ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಪರಿಸ್ಥಿತಿ ಅನುಗುಣವಾಗಿ ನಾವು ನಿರ್ಧಾರ ಕೈಗೊಳ್ಳಲಿದ್ದೇವೆ ಎಂದಿದ್ದಾರೆ ಟ್ರಂಪ್.
ನ್ಯೂಕ್ಲಿಯರ್ ಪರೀಕ್ಷೆಗೆ ನಿರ್ದೇಶನ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ತಮ್ಮ ನಿಗದಿತ ಸಭೆಗೂ ಮುಂಚೆಯೇ ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿ, ರಕ್ಷಣಾ ಇಲಾಖೆಗೆ ತಕ್ಷಣ ಪರಮಾಣು ಪರೀಕ್ಷೆ ಪ್ರಾರಂಭಿಸಲು ನಿರ್ದೇಶಿಸಿದ್ದರು. ಬಳಿಕ ಸಂದರ್ಶನದಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.