2020ರ ದೆಹಲಿ ಗಲಭೆ ಪಿತೂರಿ; ಜಾಮೀನಿಗೆ ವಿರೋಧ – “ದೇಶದ ವರ್ಚಸ್ಸಿಗೆ ಹಾನಿ ಮಾಡಲು ಯೋಜಿಸಿದ ಕೃತ್ಯ” ಎಂದ ದೆಹಲಿ ಪೊಲೀಸರು

ನವದೆಹಲಿ: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರನ್ ಹೈದರ್, ಗುಲ್ಫಿಶಾ ಫಾತಿಮಾ ಮತ್ತು ಇತರರಿಗೆ ಜಾಮೀನು ನೀಡಲು ದೆಹಲಿ ಪೊಲೀಸರು (Delhi Police) ವಿರೋಧಿಸಿದ್ದಾರೆ.

ಆರೋಪಿಗಳು ಜಾಮೀನು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಹಿನ್ನೆಲೆ ದೆಹಲಿ ಪೊಲೀಸರು ಜಾಮೀನು ವಿರೋಧಿಸಿ ಅಫಿಡವಿಟ್ ಸಿದ್ಧಪಡಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಗಲಭೆ ಸ್ವಯಂಪ್ರೇರಿತವಾಗಿ ಆಗಿಲ್ಲ. ದೇಶದಲ್ಲಿ ಶಾಂತಿ ಕದಡಲು ಮತ್ತು ಜಾಗತಿಕವಾಗಿ ಭಾರತದ ವರ್ಚಸ್ಸಿಗೆ ಹಾನಿ ಮಾಡಲು ಎಚ್ಚರಿಕೆಯಿಂದ ಯೋಜಿಸಲಾದ ಪ್ರಯತ್ನ ಇದಾಗಿದೆ ಎಂದು ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ
ಆರೋಪಿಗಳು ಮಾಡಿರುವ ಪಿತೂರಿಗೆ ಸಂಬಂಧಿಸಿದಂತೆ ಸಾಕ್ಷಿಗಳ ಹೇಳಿಕೆಗಳು, ದಾಖಲೆಗಳು ಮತ್ತು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧದ ಭಿನ್ನಾಭಿಪ್ರಾಯವನ್ನು ಅಸ್ತ್ರವಾಗಿ ಬಳಸಿಕೊಂಡು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹೊಡೆತ ತರುವ ಉದ್ದೇಶದಿಂದ ಈ ಗಲಭೆಯನ್ನು ಸೃಷ್ಟಿಸಿದ್ದಾರೆ ಎಂದು ಪೊಲೀಸರು ವಾದಿಸಲಿದ್ದಾರೆ.
ಅಂತಾರಾಷ್ಟ್ರೀಯ ಗಮನ ಸೆಳೆಯಲು ಮತ್ತು ದೇಶವನ್ನು ನಕಾರಾತ್ಮಕವಾಗಿ ಬಿಂಬಿಸುವ ಉದ್ದೇಶದಿಂದ ಹಾಗೂ ಈ ಗಲಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡುವ ಸಂದರ್ಭಕ್ಕೆ ಹೊಂದಿಕೆಯಾಗುವಂತೆ ಯೋಜಿಸಿದ್ದಾರೆ. ಹೀಗಾಗಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರನ್ ಹೈದರ್ ಮತ್ತು ಗುಲ್ಫಿಶಾ ಫಾತಿಮಾ ಸೇರಿದಂತೆ ಅರ್ಜಿದಾರರಿಗೆ ಜಾಮೀನು ನೀಡಬಾರದು. ಅವರನ್ನು ಜೈಲಿನಲ್ಲಿಡಬೇಕು ಎಂದು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ