ಬೆಂಗಳೂರಿನ ಫೈನಾನ್ಸ್ ಕಂಪನಿ ಬ್ಯಾಂಕ್ ಖಾತೆ ಹ್ಯಾಕ್: ₹47 ಕೋಟಿ ಲೂಟಿ, ಬೆಳಗಾವಿ ಮೂಲದ ಓರ್ವನ ಬಂಧನ

ಬೆಂಗಳೂರು: ಹಿಂದೆಲ್ಲ ಹಣಕಾಸಿನ ವ್ಯವಹಾರ ಹೆಚ್ಚಾಗಿ ನಗದು ರೂಪದಲ್ಲೇ ನಡೆಯುತ್ತಿತ್ತು. ಆಗ ಕಳ್ಳರು ಮನೆಗಳಿಗೆ ನುಗ್ಗಿ ಅಥವಾ ದಾರಿಯಲ್ಲಿ ಹೋಗುವವರನ್ನ ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ರು. ಆದರೆ ಈಗ ಡಿಜಿಟಲ್ ವ್ಯವಹಾರ ಹೆಚ್ಚಾಗಿದ್ದು, ಕಳ್ಳರು ಸಹ ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮ ಕುಕೃತ್ಯದ ಪರಿ ಬದಲಾಯಿಸಿಕೊಂಡಿದ್ದಾರೆ. ಎಲ್ಲೆಡೆ ಸೈಬರ್ ವಂಚಕರ ಜಾಲ ಆವರಿಸಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಕಳ್ಳತನಕ್ಕೆ ಇಳಿದಿದ್ದಾರೆ. ಜನರ ‘ಡಿಜಿಟಲ್ ಪರ್ಸ್’ಗೆ ಕೈ ಹಾಕಿ ಹಣ ದೋಚುತ್ತಿದ್ದಾರೆ. ಅದ್ರಲ್ಲೂ ದೇಶದ ಪ್ರಮುಖ ನಗರಗಳಲ್ಲಿ ಕರ್ನಾಟಕದ ಬೆಂಗಳೂರು ಸೈಬರ್ ಕ್ರೈಮ್ (Cyber Crime) ಹಬ್ ಆಗಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಮತ್ತೊಂದು ಸೈಬರ್ ವಂಚನೆ ಕೇಸ್ ಬೆಳಕಿಗೆ ಬಂದಿದೆ.

ವಿದೇಶದಲ್ಲಿ ಕುಳಿತು ಬೆಂಗಳೂರಿನಲ್ಲಿರುವ (Bengaluru) ವಿಸ್ಡಮ್ ಫೈನಾನ್ಸ್ ಕಂಪನಿಯ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಕೋಟಿ ಕೋಟಿ ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮೂಲದ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಸ್ಮಾಯಿಲ್ ಬಂಧಿತ ಆರೋಪಿ.
ವಿಪಿಎನ್ ನೆಟ್ವರ್ಕ್ ಬಳಸಿ ಹ್ಯಾಕ್
ವಿಪಿಎನ್ ನೆಟ್ವರ್ಕ್ (VPN Network) ಬಳಸಿ ಬರೋಬ್ಬರಿ 47 ಕೋಟಿ ಕದ್ದ ಸೈಬರ್ ವಂಚಕರು ಹಣವನ್ನ 600 ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು, ಆತನ ಬ್ಯಾಂಕ್ ಖಾತೆಯಲ್ಲಿ 10 ಕೋಟಿ ಹಣ ಫ್ರೀಜ್ ಮಾಡಿದ್ದಾರೆ. ಜೊತೆಗೆ ಲ್ಯಾಪ್ ಟಾಪ್ ವಶಕ್ಕೆ ಪಡೆದುಕೊಂಡಿದ್ದಾರೆ.
600 ಖಾತೆಗಳಿಗೆ ಹಣ ವರ್ಗ
ಕಳೆದ ಆಗಸ್ಟ್ 7ರಂದು ಫೈನಾನ್ಸ್ ಕಂಪನಿಯೊಂದರ ಬ್ಯಾಂಕ್ ಖಾತೆಯನ್ನ (Bank Account) ಹ್ಯಾಕ್ ಮಾಡಿದ್ದರು. ಈ ಕುರಿತು ಆ.9ರಂದು ಸಂಸ್ಥೆಯ ಫೈನಾನ್ಸ್ ಮ್ಯಾನೇಜರ್ ಪ್ರಕಾಶ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಸೈಬರ್ ಪೊಲೀಸರು ಆರೋಪಿಗಾಗಿ ಕರ್ನಾಟಕ ಹಾಗೂ ಹೈದರಾಬಾದ್ನಲ್ಲಿ ಹುಡುಕಾಟ ನಡೆಸಲಾಗಿತ್ತು. ತನಿಖೆ ಚುರುಕುಗೊಳಿಸಿದ ಬಳಿಕ ಆರೋಪಿ ವಿದೇಶದಲ್ಲಿ ಕುಳಿತು ವಿಪಿಎನ್ ನೆಟ್ವರ್ಕ್ ಬಳಸಿ ಅಕೌಂಟ್ ಹ್ಯಾಕ್ ಮಾಡಿರೋದು ಗೊತ್ತಾಯ್ತು. ಫೈನಾನ್ಸ್ ಸಂಸ್ಥೆಯ 2 ಬ್ಯಾಂಕ್ ಖಾತೆಯಗಳಿಗೆ ಕನ್ನ ಹಾಕಿದ್ದ ಖದೀಮರು, 47 ಕೋಟಿ ದೋಚಿದ್ದ ಸೈಬರ್ ಕಳ್ಳರು ಕೆಲವೇ ನಿಮಿಷಗಳಲ್ಲಿ 600 ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು ಅನ್ನೋದು ಪತ್ತೆಯಾಯಿತು. ಈ ಪ್ರಕರಣ ಭೇದಿಸಿದ ಪೊಲೀಸರು ಹ್ಯಾಕಿಂಗ್ ತಂಡಕ್ಕೆ ಸಾಥ್ ನೀಡಿದ್ದ ಓರ್ವನನ್ನ ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಆರೋಪಿ ಇಸ್ಮಾಯಿಲ್.
ಕೇಸ್ ಸಂಬಂಧ ಹ್ಯಾಕ್ ಮಾಡುವ ತಂಡದ ಜೊತೆಗೆ ಲಿಂಕ್ ಹೊಂದಿದ್ದ ಬೆಳಗಾವಿ ಮೂಲದ ಆರೋಪಿ ಇಸ್ಮಾಯಿಲ್ನನ್ನ ಪೊಲೀಸರು ಬಂಧಿಸಿದ್ದಾರೆ. ದುಬೈ, ಚೀನಾ, ಹಾಂಕಾಂಗ್ನಲ್ಲಿ ಕುಳಿತು ಹ್ಯಾಕ್ ಮಾಡುತ್ತಿದ್ದ ತಂಡದೊಂದಿಗೆ ಇಸ್ಮಾಯಿಲ್ ಸಂಪರ್ಕದಲ್ಲಿದ್ದ, ಸರ್ವಸರ್ ಅಕ್ಸೆಸ್ ಕೂಡ ನೀಡಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.