ಮಧ್ಯಪ್ರದೇಶದಲ್ಲಿ ದಸರಾ ದುರಂತ: ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ನದಿಗೆ ಉರುಳಿ 12 ಸಾವು

ವಿಜಯ ದಶಮಿಯಂದೇ (ಅಕ್ಟೋಬರ್ 2) ಮಧ್ಯ ಪ್ರದೇಶದಲ್ಲಿ (Madhya Pradesh) ಭೀಕರ ದುರಂತ ನಡೆದಿದ್ದು, ದುರ್ಗಾ ದೇವಿಯ ವಿಗ್ರಹ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಟ್ರಾಲಿ ನದಿಗೆ ಉರುಳಿ ಸುಮಾರು 12 ಮಂದಿ ಮೃತಪಟ್ಟು, ಹಲವರು ನಾಪತ್ತೆಯಾಗಿದ್ದಾರೆ (Dasara Tragedy).

ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದುರ್ಗಾ ದೇವಿಯ ವಿಗ್ರಹ ವಿಸರ್ಜನೆ ಮುಗಿಸಿ ಹಿಂತಿರುಗುತ್ತಿದ್ದ ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಸೇತುವೆಗೆ ಡಿಕ್ಕಿ ಹೊಡೆದು ಬಳಿಕ ನದಿಗೆ ಉರುಳಿತು. ಪೊಲೀಸರು ಮತ್ತು ಜಿಲ್ಲಾಡಳಿತ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಪಂಧಾನಾ ಪೊಲೀಸ್ ಠಾಣೆ ಪ್ರದೇಶದ ನರಸಿಂಘ ಗ್ರಾಮದ ಚಂಬಲ್ ನದಿಯಲ್ಲಿ ಈ ಘಟನೆ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಮಕ್ಕಳು ಸೇರಿ ಸುಮಾರು 20 ಮಂದಿ ಇದ್ದರು. ಮೃತರಲ್ಲಿ 8 ಮಂದಿ ಬಾಲಕಿಯರು ಸೇರಿದ್ದಾರೆ. ಸಂಜೆ 6 ಗಂಟೆಯ ಹೊತ್ತಿಗೆ ನದಿಯಿಂದ 11 ಶವಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಪ್ರಯತ್ನ ಮುಂದುವರಿದಿದ್ದು, ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಹಲವು ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಆಘಾತ ವ್ಯಕ್ತಪಡಿಸಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನು ಘೋರ ದುರಂತ ಎಂದು ಕರೆದಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ 4 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ʼʼಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಸಂತ್ರಸ್ತ ಕುಟುಂಬಗಳಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿʼʼ ಎಂದು ಬರೆದುಕೊಂಡಿದ್ದಾರೆ.
ʼʼಅಪಘಾತದ ನಂತರ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರುʼʼ ಎಂದು ಉಜ್ಜಯಿನಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಅಭಿಷೇಕ್ ರಂಜನ್ ಘಟನೆಯ ವಿವರ ನೀಡಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ಅಧಿಕಾರಿಗಳು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.