ನ್ಯಾಯಾಲಯಕ್ಕೆ ಗೈರು: ಮಂಗಳೂರಿನ ಇಬ್ಬರು ಕುಖ್ಯಾತ ವಾರಂಟ್ ಆರೋಪಿಗಳ ಬಂಧನ

ಮಂಗಳೂರು: ಬರ್ಕೆ ಪೊಲೀಸ್ ಠಾಣೆ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಮಂಗಳೂರಿನ ಅಬ್ತಾಸ್ ಹಾಜಿ ಕಾಂಪೌಂಡ್ನ ನಿವಾಸಿ, ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದ ಶೇಖ್ ಶಹಬಾಜ್ (31) ಮತ್ತು ಕಸಬಾ ಬೆಂಗ್ರೆ ನಿವಾಸಿ, ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಮೊಹಮ್ಮದ್ ನಿಜಾಮುದ್ದೀನ್ ಅಲಿಯಾಸ್ ಬ್ರೋ ನಿಜಾಮ್ (30) ಎಂದು ಗುರುತಿಸಲಾಗಿದೆ.
ಶಹಬಾಜ್ ಬಂಧನ ವಿವರ
ಶಹಬಾಜ್ನನ್ನು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಇಂದುಪುರ ತಾಲೂಕಿನ 2 ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರುಗೂರು ಪ್ರದೇಶದಿಂದ ಸೆಪ್ಟೆಂಬರ್ 24ರ ರಾತ್ರಿ ಬಂಧಿಸಲಾಗಿದೆ. ಬರ್ಕೆ ಠಾಣೆಯ ವಾರಂಟ್ ಸಿಬ್ಬಂದಿ ಚೇತನ್ ಬಿ.ಆರ್. ಮತ್ತು ಮೋಹನ್ ಅವರು ಇಂದುಪುರ 2 ಟೌನ್ ಠಾಣೆಯ ಇನ್ಸ್ಪೆಕ್ಟರ್ ಅಬ್ದುಲ್ ಕರೀಂ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಸಹಾಯದಿಂದ ಈ ಕಾರ್ಯಾಚರಣೆ ನಡೆಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದ ಕಾರಣಕ್ಕಾಗಿ ಆತನ ವಿರುದ್ಧ ಬರ್ಕೆ ಠಾಣೆಯಲ್ಲಿ ಮತ್ತೊಂದು ಪ್ರಕರಣವನ್ನು ಸಹ ದಾಖಲಿಸಲಾಗಿದೆ.ಇದರ ಜೊತೆಗೆ, ಶಹಬಾಜ್ ವಿರುದ್ಧ ಬರ್ಕೆ ಠಾಣೆಯಲ್ಲಿ ಎರಡು ಪ್ರಕರಣಗಳು ಹಾಗೂ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕ ಪ್ರಿಸನರ್ ಆ್ಯಕ್ಟ್ , ಪೋಕ್ಸೋ ಕಾಯ್ದೆ ಮತ್ತು ಎನ್ಡಿಪಿಎಸ್ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.ನಿಜಾಮುದ್ದೀನ್ ಅಲಿಯಾಸ್ ಬ್ರೋ ನಿಜಾಮ್ ಬಂಧನ ವಿವರ
ನಿಜಾಮುದ್ದೀನ್ ಅಲಿಯಾಸ್ ಬ್ರೋ ನಿಜಾಮ್ನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅನಂತ್ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಮಚ್ಚೀಂದ್ರನಾಥ್ ಜೋಗಿ, ಸಿಬ್ಬಂದಿ ಅಭಿಷೇಕ್ ಮತ್ತು ವಿಠಲ್ ಗಡದಾರ್ ಅವರು ಸೆಪ್ಟೆಂಬರ್ 25ರ ಸಂಜೆ 5 ಗಂಟೆ ಸುಮಾರಿಗೆ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದ ಕಾರಣಕ್ಕಾಗಿ ಆತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.ಆತನ ವಿರುದ್ಧ ಬಂಟ್ವಾಳ ನಗರ ಮತ್ತು ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿಯೂ ಸಹ ವಾರಂಟ್ಗಳು ಬಾಕಿ ಉಳಿದಿವೆ. ಅಲ್ಲದೆ, ಮಂಗಳೂರು ಪೂರ್ವ, ಪಣಂಬೂರು, ಉರ್ವ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆ ಮತ್ತು ಕರ್ನಾಟಕ ಪ್ರಿಸನರ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.
