ಆನೆಗಾಗಿ ಭಾರಿ ಜಗಳ: ಸುಭದ್ರೆ ಎಂಬ ಆನೆಗಾಗಿ ಉಡುಪಿ ಮಠ ಮತ್ತು ಹಿರೇಕಲ್ಮಠಗಳ ನಡುವೆ ಹಕ್ಕು ಯುದ್ಧ!

ಉಡುಪಿ : ಉಡುಪಿಯ ಶ್ರೀಕೃಷ್ಣ ಮಠ (Udupi Krishna Temple) ಹಾಗೂ ಹೊನ್ನಾಳಿಯ ಹಿರೇಕಲ್ಮಠದ ನಡುವೆ ಆನೆಯೊಂದರ ವಿಷಯಕ್ಕೆ ಸಂಘರ್ಷ ನಡೆದಿದೆ. ಮೂಲತಃ ಉಡುಪಿಯ ಮಠಕ್ಕೆ ಸೇರಿದ ಆನೆಯ ಹೆಸರು ಸುಭದ್ರೆ. ಸುಭದ್ರೆ ಆ ಮಠದಲ್ಲಿದ್ದಾಗ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಯ ಆರೈಕೆ ಮಾಡಲಾಗದೇ ಉಡುಪಿ ಮಠ ಸುಭದ್ರೆಯನ್ನು ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರಕ್ಕೆ (Sakrebyle elephant camp)ಕಳುಹಿಸಿಕೊಟ್ಟಿತ್ತು.

ಶಿವಮೊಗ್ಗದಲ್ಲಿ ಚಿಕಿತ್ಸೆ ನೀಡಿ ಆಕೆ ಗುಣಮುಖವಾದ ನಂತರ ಉಡುಪಿ ಮಠದ ಆಡಳಿತ ಮಂಡಳಿ ಆಕೆಯನ್ನು ವಾಪಸ್ ಪಡೆಯಲು ಮುಂದಾಗಲಿಲ್ಲ. ಆದರೆ ಸುಭದ್ರೆಯನ್ನು ಹೊನ್ನಾಳಿಯ ಹಿರೇಕಲ್ಮಠದ ಆಡಳಿತ ಮಂಡಳಿ ಆನೆಯನ್ನು ಇಂತ್ತಿಷ್ಟು ಹಣ ಕಟ್ಟಿ ಸರ್ಕಾರದ ನಿಯಮಗಳ ಅನುಸಾರವಾಗಿ ಕರೆದುಕೊಂಡು ಹೋಗಿತ್ತು. ಇದೀಗ ಉಡುಪಿ ಮಠವು ಸುಭದ್ರೆಯನ್ನು ಮರಳಿ ಕೇಳಿದ ಹಿನ್ನೆಲೆ ಎರಡೂ ಮಠಗಳ ನಡುವೆ ಸಂಘರ್ಷ ಏರ್ಪಟ್ಟಿದೆ.
ಆನೆಯನ್ನು ಹಿಂತಿರುಗಿಸಲು ಹಿರೇಕಲ್ಮಠದ ವಿರೋಧವೇಕೆ?
ಕೆಲ ವರ್ಷಗಳ ಹಿಂದೆ ಈ ಹೆಣ್ಣು ಆನೆ ಅನಾರೋಗ್ಯಕ್ಕೆ ತುತ್ತಾಗಿತ್ತು. ಗ್ಯಾಂಗ್ರಿನ್, ಶುಗರ್ ಸಮಸ್ಯೆ ಹಾಗೂ ಬಿಪಿ ಸಮಸ್ಯೆಯಿಂದ ಬಳಲುತ್ತಿತ್ತು.ಆಕೆಗೆ ಚಿಕಿತ್ಸೆ ಕೊಡಿಸಿ ನಮಗೆ ಸಾಕಲು ಸಾಧ್ಯವಿಲ್ಲವೆಂದು ಹೇಳಿ 2019ರಲ್ಲಿ ಉಡುಪಿ ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ಆಕೆಯನ್ನು ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರಕ್ಕೆ ಕಳುಹಿಸಿಕೊಟ್ಟಿತ್ತು. ಅಲ್ಲಿ ಅವಳು ಅರಣ್ಯ ಇಲಾಖೆಯಿಂದ ಚಿಕಿತ್ಸೆ ಪಡೆದು ಗುಣಮುಖವಾಗುವುದಷ್ಟೇ ಅಲ್ಲದೇ ನಾಲ್ಕು ಟನ್ನಿಂದ ಎಂಟು ಟನ್ಗೆ ತನ್ನ ತೂಕ ಹೆಚ್ಚಿಸಿಕೊಂಡು ದಷ್ಟಪುಷ್ಟವಾಗಿ ಬೆಳೆದಳು.
ಸಕ್ರೆಬೈಲ್ ಆನೆ ಬಿಡಾರದಲ್ಲೇ ಇದ್ದ ಆನೆಯನ್ನು ಮರಳಲಿ ಪಡೆಯಲು ಉಡುಪಿಯ ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ಮುಂದಾಗಲಿಲ್ಲ. ಅದರ ಬದಲಿಗೆ ಹೊನ್ನಾಳಿಯ ಹಿರೇಕಲ್ಮಠದ ಆಡಳಿತ ಮಂಡಳಿ ಆನೆಯನ್ನು 12.20 ಲಕ್ಷ ಹಣ ಕಟ್ಟಿ ಸರ್ಕಾರದ ನಿಯಮಗಳ ಅನುಸಾರವಾಗಿ ಮಠಕ್ಕೆ ಕರೆತರಲಾಗಿತ್ತು.ಜೊತೆಗೆ ಮಠದಿಂದ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು.ಆದರೆ ಸುಭದ್ರೆಯನ್ನು ನಮಗೆ ಮರಳಿಸಬೇಕೆಂದು ಭಾನುವಾರ ಉಡುಪಿ ಮಠದ ಸಿಬ್ಬಂದಿ ಲಾರಿ ಸಹಿತ ಬಂದಿದ್ದಾರೆ.
ಕಾನೂನುಬದ್ಧವಾಗಿ ಹಿರೇಕಲ್ಮಠ ಸೇರಿದ್ದ ಸುಭದ್ರೆ
ಸುಭದ್ರಾ ಆನೆ ಉಡುಪಿ ಶ್ರೀಕೃಷ್ಣ ಸೇರಿದ್ದು ಎನ್ನುವುದು ಸತ್ಯ. ಆದರೆ ಆನೆ ಅನಾರೋಗ್ಯಕ್ಕೀಡಾಗಿದ್ದಾಗ ಚಿಕಿತ್ಸೆಗಾಗಿ ಶಿವಮೊಗ್ಗದ ಸಕ್ರೆಬೈಲಲ್ಲಿ ಬಿಟ್ಟಿದ್ದರು. ಗುಣಮುಖವಾದ ಆನೆಯನ್ನು ಮತ್ತೇ ಉಡುಪಿ ಮಟಕ್ಕೆ ಕೊಂಡೊಯ್ಯಲು ಇಚ್ಚಿಸಲಿಲ್ಲ.ಅದೇ ಸಮಯದಲ್ಲಿ ಹೊನ್ನಾಳಿಯ ಹಿರೇಕಲ್ಮಠಕ್ಕೆ ಆನೆಯ ಅವಶ್ಯಕತೆ ಇದ್ದಿದ್ದರಿಂದ ಅಲ್ಲಿನ ಆಡಳಿತ ಮಂಡಳಿ ಆನೆಯನ್ನು ಕರೆತಂದಿದೆ. ಸರ್ಕಾರದ ನಿಯಮಗಳಿಗನುಸಾರವಾಗಿಯೇ ಆನೆಯನ್ನು ಕರೆತರಲಾಗಿದೆ. ಅದರೊಂದಿಗೆ ಶ್ರೀಕೃಷ್ಣ ಮಠದ ಗುರುಗಳ ಅನಮತಿ ಬೇಕು ಎಂದು ಇಲಾಖೆ ಹೇಳಿದ್ದರಿಂದ ಅವರ ಒಪ್ಪಿಗೆ ಕೇಳಿದ್ದರು. ನಿರಂತರವಾಗಿ ಉಡುಪಿ ಮಠದ ಜೊತೆಗೆ ಸಂಪರ್ಕ ಇಟ್ಟುಕೊಂಡು ಆನೆ ಖರೀದಿ ಬಗ್ಗೆ ಪತ್ರ ವ್ಯವಹಾರ ಕೂಡಾ ಮಾಡಲು ಹೊನ್ನಾಳಿ ಮಠ ಮುಂದಾಗಿತ್ತು.ಆದರೆ ಉಡುಪಿ ಮಠದ ಸ್ವಾಮೀಜಿಗಳು ಪತ್ರ ವ್ಯವಹಾರ ಬೇಡ ಎಂದಿದ್ದರು. ಈಗ ಆನೆ ಸುಭದ್ರೆ ಚೇತರಿಸಿಕೊಂಡಿದ್ದಾಳೆಂದು ಮಾಹಿತಿ ಪಡೆದು ಲಾರಿ ಸಮೇತ ಬಂದು ಆನೆಯನ್ನು ಕರೆದುಕೊಂಡು ಹೋಗಲು ಉಡುಪಿ ಮಠದ ಸಿಬ್ಬಂದಿ ಮುಂದಾಗಿದ್ದರು. ಆಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಮಾತನಾಡಿ ಆನೆಯನ್ನು ಇಲ್ಲಿಯೇ ಉಳಿಸಿಕೊಳ್ಳಲು ಸಹಕರಿಸಿದ್ದಾರೆ.
