ಸ್ಮಗ್ಲಿಂಗ್ ಪ್ರಕರಣದ ಸುಳಿಯಲ್ಲಿ ದುಲ್ಕರ್ ಸಲ್ಮಾನ್: ನಟನಿಗೆ ಸಮನ್ಸ್ ಜಾರಿ

ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟ ಮತ್ತು ನಿರ್ಮಾಪಕರೂ ಆಗಿರುವ ದುಲ್ಕರ್ ಸಲ್ಮಾನ್ ಅವರಿಗೆ ಸಂಕಷ್ಟ ಎದುರಾಗಿದೆ. ದುಲ್ಕರ್ ಸಲ್ಮಾನ್ ಅದ್ಭುತ ನಟರಾಗಿರುವ ಜೊತೆಗೆ ಕಾರು ಸಂಗ್ರಹಕಾರ ಸಹ. ಅವರ ಬಳಿ ಹಲವು ಐಶಾರಾಮಿ ಬ್ರ್ಯಾಂಡಿನ ಹಲವಾರು ಐಶಾರಾಮಿ ಕಾರುಗಳಿವೆ. ಕೆಲ ಮೂಲಗಳ ಪ್ರಕಾರ ದುಲ್ಕರ್ ಸಲ್ಮಾನ್ ಬಳಿ 40ಕ್ಕೂ ಹೆಚ್ಚು ಕಾರುಗಳಿವೆಯಂತೆ. ಇದೀಗ ಇದೇ ಅವರಿಗೆ ಸಮಸ್ಯೆ ತಂದಿದೆ. ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದುಲ್ಕರ್ ಸಲ್ಮಾನ್ಗೆ ಕಸ್ಟಮ್ಸ್ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳು ಕೇರಳ ರಾಜ್ಯದಾದ್ಯಂತ ‘ನುಮ್ಕೂರ್’ ಹೆಸರಿನಲ್ಲಿ ಇತ್ತೀಚೆಗಷ್ಟೆ ದಾಳಿ ನಡೆಸಿದ್ದರು. ಭೂತಾನಿ ಭಾಷೆಯಲ್ಲಿ ನುಮ್ಕೂರ್ ಎಂದರೆ ವಾಹನ ಎಂದರ್ಥವಂತೆ. ನಿಯಮಬಾಹಿರವಾಗಿ ಹೊರದೇಶಗಳಿಂದ ಕಾರುಗಳನ್ನು ಖರೀದಿ ಮಾಡಿದವರನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ಮಾಡಲಾಗಿತ್ತು. ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳ ಮೇಲೂ ಸಹ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರೂ ನಟರುಗಳ ಸಂಗ್ರಹದಲ್ಲಿರುವ ಹಲವಾರು ಕಾರುಗಳ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಈ ವೇಳೆ ದುಲ್ಕರ್ ಸಲ್ಮಾನ್ ಅವರಿಗೆ ಸೇರಿದ ಎರಡು ಕಾರುಗಳ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಮೂಡಿದ್ದು, ದುಲ್ಕರ್ ಅವರ ಎರಡು ಐಶಾರಾಮಿ ಕಾರುಗಳನ್ನು ಸೀಜ್ ಮಾಡಿದ್ದು, ದುಲ್ಕರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ದುಲ್ಕರ್ ಅವರ ಮನೆಯಿಂದ ಟೊಯೊಟಾ ಲ್ಯಾಂಡ ಕ್ರ್ಯೂಸರ್, ಲಾಂಡ್ ರೋವರ್ ಡಿಫೆಂಡರ್ ಕಾರುಗಳನ್ನು ಸೀಜ್ ಮಾಡಿದ್ದಾರೆ. ಎರಡೂ ಕಾರುಗಳನ್ನು ತ್ರಿಶೂರ್ನಲ್ಲಿರುವ ದುಲ್ಕರ್ ಅವರ ಮನೆಯಿಂದ ಸೀಜ್ ಮಾಡಲಾಗಿದ್ದು, ಎರಡರಲ್ಲಿ ಒಂದು ಕಾರು ದುಲ್ಕರ್ ಅವರ ಹೆಸರಿನಲ್ಲಿ ನೊಂದಣಿ ಆಗಿಲ್ಲ ಎನ್ನಲಾಗುತ್ತಿದೆ. ಆ ಕಾರಿನ ಮಾಲೀಕರನ್ನು ಪತ್ತೆ ಹಚ್ಚುವ ಕಾರ್ಯ ಚಾಲ್ತಿಯಲ್ಲಿದೆ. ದುಲ್ಕರ್ ಈ ಎರಡು ಕಾರುಗಳನ್ನು ಭೂತಾನ್ ನಿಂದ ಖರೀದಿಸಿದ್ದಾರೆ ಎಂಬ ಅನುಮಾನವನ್ನು ಕಸ್ಟಮ್ಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಭೂತಾನ್ ಸೇನೆಯಿಂದ ವಿದೇಶಿ ಐಶಾರಾಮಿ ಕಾರುಗಳನ್ನು ಕಡಿಮೆ ದರಕ್ಕೆ ಖರೀದಿ ಮಾಡಿ ಅವನ್ನು ಕಳ್ಳದಾರಿಯಿಂದ ಭಾರತಕ್ಕೆ ತಂದು, ಅವುಗಳನ್ನು ನಕಲಿ ಹೆಸರುಗಳಲ್ಲಿ ನೊಂದಣಿ ಮಾಡಿ ಮಾರಾಟ ಮಾಡುತ್ತಿದ್ದು, ಇಂಥಹಾ ನಕಲಿ ದಾಖಲೆಯ, ತೆರಿಗೆ ವಂಚಿಸಿ ತಂದಿರುವ ಕಾರುಗಳು ಕೇರಳದಲ್ಲಿ ಹೆಚ್ಚಾಗಿದ್ದರಿಂದ ಕಸ್ಟಮ್ಸ್ ಅಧಿಕಾರಿಗಳು ರಾಜ್ಯದಾದ್ಯಂತ ಹಲವಾರು ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳ ಮನೆಗಳ ಮೇಲೆ ದಾಳಿ ಮಾಡಿ, ಹಲವು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.