ಬೆಂಗಳೂರು ಟ್ರಾಫಿಕ್ನಿಂದ ವರ್ಷಕ್ಕೆ 2.5 ತಿಂಗಳು ನಷ್ಟ”

ಬೆಂಗಳೂರು: ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೊಸದೇನಲ್ಲ. ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಉದ್ಯೋಗಾವಕಾಶಗಳು ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ 7 ಲಕ್ಷಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿಯಾಗಿವೆ. ಹೀಗಿರುವಾಗ ಪ್ರತಿನಿತ್ಯ ಓಡಾಡುವ ಜನರು ಟ್ರಾಫಿಕ್ ಸಮಸ್ಯೆ ಎದುರಿಸುವುದು ಸಾಮಾನ್ಯ. ಈ ಬಗ್ಗೆ ಟೆಕ್ಕಿಯೊಬ್ಬರು ಹಂಚಿಕೊಂಡ ರೆಡ್ಡಿಟ್ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. .

ಬೆಂಗಳೂರಿನ ಜೆ.ಪಿ ನಗರದ ನಿವಾಸಿಯಾಗಿರುವ ಈ ಟೆಕ್ಕಿ ದಿನನಿತ್ಯ ನಗರದಲ್ಲಿ ಸಂಚರಿಸುವಾಗ ಅವರು ಎದುರಿಸುವ ಸಮಸ್ಯೆಗಳನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಇವರ ವಾರ್ಷಿಕ ಆದಾಯ 28 ಲಕ್ಷ ರೂಪಾಯಿಗಳಾಗಿದ್ದು, ಅದರಲ್ಲಿ 6.5 ಲಕ್ಷ ರೂ.ಗಳಷ್ಟು ತೆರಿಗೆ ಕಟ್ಟುತ್ತಾರೆ. ಇದರೊಂದಿಗೆ ದಿನನಿತ್ಯದ ಖರ್ಚು ವೆಚ್ಚದಲ್ಲಿ ವರ್ಷಕ್ಕೆ 1.4 ಲಕ್ಷ ರೂ.ಗಳಷ್ಟು GST ಪಾವತಿಸುತ್ತಾರೆ.
ಅವರ ಆಫೀಸು ಔಟರ್ ರಿಂಗ್ ರೋಡ್ನಲ್ಲಿರುವ ಕಾರಣ ದಿನಾಲೂ ಅವರು ಮನೆಯಿಂದ 14 ಕಿ.ಮೀ ಚಲಿಸಬೇಕು. ಇಷ್ಟು ದೂರ ಚಲಿಸಲು ಸಾಮಾನ್ಯವಾಗಿ 30 ನಿಮಿಷಗಳು ಸಾಕು. ಆದರೆ ಟ್ರಾಫಿಕ್ನ ಕಾರಣದಿಂದಾಗಿ ಪ್ರತಿದಿನ ಮನೆಯಿಂದ ಆಫೀಸು ತಲುಪಲು 90 ನಿಮಿಷಗಳ ಕಾಲಾವಧಿ ತೆಗೆದುಕೊಳ್ಳುತ್ತಾರೆ. ಮರಳಿ ಮನೆಗೆ ಬರುವಾಗಲೂ ಮತ್ತದೇ 90 ನಿಮಿಷ ಟ್ರಾಫಿಕ್ನಲ್ಲಿ ಕಳೆಯುತ್ತಾರೆ. ‘ಬೆಂಗಳೂರಿನ ಈ ಟ್ರಾಫಿಕ್ನಿಂದ ನನ್ನ ಒಂದು ವರ್ಷದಲ್ಲಿ ಎರಡೂ ವರೆ ತಿಂಗಳುಗಳು ಟ್ರಾಫಿಕ್ನಲ್ಲೇ ಕಳೆದು ಹೋಗುತ್ತಿವೆ ‘ಎಂದು ರೆಡ್ಡಿಟ್ನಲ್ಲಿ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.
ಇವರ ಈ ಪೋಸ್ಟ್ಗೆ ರೆಡ್ಡಿಟ್ ಬಳಕೆದಾರರ ಪ್ರತಿಕ್ರಿಯೆ ಹೇಗಿತ್ತು?
ಟೆಕ್ಕಿಯ ಟ್ರಾಫಿಕ್ ಬಗೆಗಿನ ಈ ಪೋಸ್ಟ್ ಹಲವಾರು ನೆಟ್ಟಿಗರ ಗಮನ ಸೆಳೆದಿದೆ. ಹಲವರು ಪೋಸ್ಟ್ಗೆ ಕಾಮೆಂಟ್ ಮಾಡಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ‘ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರುಗಳನ್ನು ಸ್ವಚ್ಛವಾದ ಗಾಳಿಯಿರುವ ಮತ್ತು ಟ್ರಾಫಿಕ್ ಇಲ್ಲದ ದೇಶಗಳಿಗೆ ವರ್ಗಾಯಿಸಿದರೆ ಅವರ ಕೆಲಸದ ಸಾಮರ್ಥ್ಯ 20 ಪ್ರತಿಶತ ಹೆಚ್ಚಾಗಲಿದೆ’ ಎಂದು ಕಾಮೆಂಟ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನೋರ್ವ ಬಳಕೆದಾರರು ‘ಇಷ್ಟು ಜನಸಂದಣಿಯಿರುವ ನಗರದಲ್ಲಿ ಹೈವೇ ನಿರ್ಮಿಸಲು ಸಾಧ್ಯವಿಲ್ಲ. ಇದು ಕೇವಲ ರಾಜಕಾರಣಿಗಳ ತಪ್ಪಲ್ಲ. ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರವೇಕೆ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿಲ್ಲ? ಇದರಿಂದಾಗಿ ಟ್ರಾಫಿಕ್ ಸಹ ಕಮ್ಮಿಯಾಗುತ್ತದೆ. ಜೇನು ನೊಣಗಳಂತೆ ಎಲ್ಲರೂ ಬಂದು ಬೆಂಗಳೂರಿನಲ್ಲಿ ಸೇರಿಕೊಂಡು ದುಬೈನಂತಹ ಇನ್ಪ್ರಾಸ್ಟ್ರಕ್ಷರ್ ನಿರೀಕ್ಷಿಸುತ್ತಿದ್ದಾರೆ ‘ಎಂದು ಕಾಮೆಂಟ್ ಮಾಡಿದ್ದಾರೆ.