ಹರಿಯಾಣದಲ್ಲಿ ಎಸಿ ಸ್ಫೋಟ: ತಂದೆ, ತಾಯಿ, ಮಗಳು ದುರಂತ ಸಾವು, ಮಗನ ಸ್ಥಿತಿ ಗಂಭೀರ

ಹರ್ಯಾಣ : ಭಾರತದ ಮನೆಗಳಿಗೆ ಎಸಿ ಸಾಮಾನ್ಯವಾಗಿದೆ. ಉರಿ ಬಿಸಿಲು, ಅತೀವ ಶೆಕೆ ಸೇರಿದಂತೆ ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ಜನವರಿಯಿಂದಲೇ ಎಸಿ ಅನಿವಾರ್ಯವಾಗುತ್ತದೆ. ಇನ್ನು ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಎಸಿ ಅತ್ಯವಶ್ಯಕವಾಗಿದೆ. ಆದರೆ ಕುಟುಂಬವೊಂದು ಮಲಗಿದ್ದ ವೇಳೆ ಎಸಿ ಸ್ಫೋಟಗೊಂಡು ದುರಂತ ಘಟನೆ ನಡೆದಿದೆ. ತಂದೆ, ತಾಯಿ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗ ಗಂಭೀರವಾಗಿ ಗಾಯಗೊಂಡು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಹರಿಯಾಮ ಫರೀದಾಬಾದ್‌ನಲ್ಲಿ ನಡೆದಿದೆ.

ಸಚಿನ್ ಕಪೂರ್ ಹಾಗೂ ರಿಂಕೂ ಕಪೂರ್ ಕುಟುಂಬ ಗ್ರೀನ್ ಫೀಲ್ಡ್ ಕಾಲೋನಿಯಲ್ಲಿ ವಾಸವಿತ್ತು. ಭಾನುವಾರ (ಸೆ.07) ರಾತ್ರಿ ಎಸಿ ಆನ್ ಮಾಡಿ ಮಲಗಿದ್ದಾರೆ. ಪೋಷಕರು ಹಾಗೂ ಇಬ್ಬರು ಮಕ್ಕಳು ಮಲಗಿದ್ದಾರೆ. ರಾತ್ರಿ 1.30ರ ವೇಳೆ ಎಸಿ ಸ್ಫೋಟಗೊಂಡಿದೆ. ಎಸಿ ಸ್ಫೋಟದ ಶಬ್ದಕೇಳಿ ಅಕ್ಕ ಪಕ್ಕದ ಮನೆಯವರು ಭಯಭೀತಗೊಂಡಿದ್ದಾರೆ. ಎಸಿ ಸ್ಫೋಟದಿಂದ ಸಚಿನ್ ಕಪೂರ್ ಮನೆ ಧಗಧಗ ಉರಿಯಲು ಆರಂಭಿಸಿದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರ ತಂಡ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಬಳಿಕ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಈ ವೇಳೆ ಸಚಿನ್ ಕಪೂರ್, ರಿಂಕೂ ಕಪೂರ್ ಹಾಗೂ ಪುತ್ರಿ ಸುಜನ್ ಕಪೂರ್ ಸ್ಥಳದಲ್ಲೆ ಸುಟ್ಟು ಕರಕಲಾಗಿದ್ದಾರೆ. ಇನ್ನು ಪುತ್ರ ಆರ್ಯನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಆರ್ಯನ್ ಸ್ಛಳೀಯ ಆಸ್ಪತ್ರೆ ದಾಖಲು
ಆರ್ಯನ್ ಗಂಭೀರ ಸುಟ್ಟಗಾಯಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ರಕ್ಷಣೆ ಮಾಡಿದ ತಂಡ ತಕ್ಷಣವೇ ಆಸ್ಪತ್ರೆ ದಾಖಲಿಸಿದೆ. ಬಹುತೇಕ ದೇಹ ಸುಟ್ಟು ಹೋಗಿದೆ. ತೀವ್ರ ನಿಘಾ ಘಟಕದಲ್ಲಿ ಆರ್ಯನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಅಗ್ನಿಶಾಮಕ ದಳ ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಸಚಿನ್ ಕಪೂರ್ ಕುಟುಂಬ ರಕ್ಷಿಸಲು ಅದೇ ಕಟ್ಟಡದ ಇತರ ಕುಟುಂಬದಳು ಪ್ರಯತ್ನಿಸಿದೆ. ಆದರೆ ಬೆಕಿ ಕೆನ್ನಾಲಗೆಯಿಂದ ಸಾಧ್ಯವಾಗಿಲ್ಲ.
ಎಸಿಯಲ್ಲಿ ಸಮಸ್ಯೆಯಿಂದ ಸ್ಫೋಟ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಎಸಿಯಲ್ಲಿನ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಎಸಿ ಹಾಗೂ ವೈಯರಿಂಗ್ ಕುರಿತು ತನಿಖೆ ನಡೆಯುತ್ತಿದೆ. ಮನೆಯ ವಸ್ತುಗಳೆಲ್ಲವೂ ಸುಟ್ಟು ಹೋಗಿದೆ.