ಮಲ್ಲಿಗೆ ಹೂ ಮುಡಿದು ಹೋದ ನಟಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಂಡ

ಕೊಚ್ಚಿ : ಮಲೆಯಾಳಂನ ಖ್ಯಾತ ನಟಿ ನವ್ಯಾನಾಯರ್ ಗೆ ಮಲ್ಲಿಗೆ ಹೂವನ್ನು ವಿಮಾನದಲ್ಲಿ ಕೊಂಡೊಯ್ದಿದ್ದಕ್ಕೆ 1.14 ಲಕ್ಷ ದಂಡ ವಿಧಿಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.1.14 ಲಕ್ಷ ದಂಡ ಹಾಕಲಾಗಿದೆ.

ವಿಕ್ಟೋರಿಯಾದಲ್ಲಿ ಮಲಯಾಳಿ ಅಸೋಸಿಯೇಷನ್ನ ಓಣಂ ಆಚರಣೆಯಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆ ಕಾರ್ಯಕ್ರಮಕ್ಕಾಗಿ ನಾನು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಹೂವುಗಳನ್ನು ಧರಿಸಿದ್ದೆ ಎಂದು ನವ್ಯಾ ತಮಾಷೆ ಮಾಡಿದ್ದು,ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡುವ ಮೊದಲು ತನ್ನ ತಂದೆ ಉಡುಗೊರೆಯಾಗಿ ನೀಡಿದ 15 ಸೆಂ.ಮೀ ಉದ್ದದ ಮಲ್ಲಿಗೆ ಹೂವಿನ ಹಾರವನ್ನು ತೆಗೆದುಕೊಂಡು ಹೋಗಿದ್ದೆ. ಆ ದೇಶದ ನಿಯಮಗಳ ಅರಿವಿಲ್ಲದೆ ವಿಮಾನ ನಿಲ್ದಾಣದ ಫಾರಂನಲ್ಲಿ ಮಲ್ಲಿಗೆ ಹೂ ತೆಗೆದುಕೊಂಡು ಹೋಗುವ ಬಗ್ಗೆ ಯಾವುದೇ ಘೋಷಣೆ ಮಾಡಿರಲಿಲ್ಲ. ಇದು ದಂಡಕ್ಕೆ ಕಾರಣವಾಯಿತು ಎಂದು ತಿಳಿಸಿದ್ದಾರೆ.
ವಿದೇಶಿ ಸಸ್ಯಗಳು ಅಥವಾ ಪ್ರಾಣಿಗಳನ್ನು ಆ ದೇಶಕ್ಕೆ ಕೊಂಡೊಯ್ಯುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಸ್ಥಳೀಯ ಪ್ರಭೇದಗಳಿಗೆ ಅಪಾಯವನ್ನುಂಟುಮಾಡುತ್ತದೆ. ಆಸ್ಟ್ರೇಲಿಯ ಸರ್ಕಾರದ ಕೃಷಿ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆಯ ಪ್ರಕಾರ, ಅಂತಹ ವಿದೇಶಿ ಸಸ್ಯ ಅಥವಾ ಪ್ರಾಣಿಗಳನ್ನು ಸರಿಯಾದ ಘೋಷಣೆ ಮತ್ತು ತಪಾಸಣೆಯ ನಂತರ ಮಾತ್ರ ದೇಶಕ್ಕೆ ತರಬೇಕು. 28 ದಿನಗಳಲ್ಲಿ ದಂಡ ಪಾವತಿಸುವಂತೆ ನಟಿಗೆ ಸೂಚಿಸಲಾಗಿದೆ.