ಮರಾಠಿ ಮೀಸಲಾತಿ ಹೋರಾಟಗಾರರ ಮುಂಬೈ ಪ್ರವೇಶಿಸುದನ್ನು ತಡೆಯಿರಿ:ಬಾಂಬೆ ಹೈಕೋರ್ಟ್

ಮುಂಬೈ,: ಮರಾಠರಿಗೆ ಮೀಸಲಾತಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮನೋಜ್ ಜರಾಂಗೆ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಹಾಗೂ ಇಡೀ ಮುಂಬೈ ನಗರವನ್ನು ಸ್ತಬ್ದಗೊಳಿಸಿದ್ದಾರೆ ಎಂದು ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ಹೇಳಿದೆ.

ಪ್ರತಿಭಟನಕಾರರು ಅತಿಕ್ರಮಿಸಿಕೊಂಡ ಇತರ ರಸ್ತೆಗಳನ್ನು ಮಂಗಳವಾರ ಸಂಜೆ 4 ಗಂಟೆ ಒಳಗೆ ತೆರವುಗೊಳಿಸುವಂತೆ ಉಚ್ಚ ನ್ಯಾಯಾಲಯ ಅಧಿಕಾರಿಗಳಿಗೆ ಆದೇಶಿಸಿದೆ.
ಪ್ರತಿಭಟನೆಯನ್ನು ಆಝಾದ್ ಮೈದಾನದಲ್ಲಿ ಮಾತ್ರ ಮಾಡಬೇಕು. ಇತರ ಕಡೆ ಮಾಡಬಾರದು ಎಂದು ಅದು ಪ್ರತಿಪಾದಿಸಿದೆ. ಮುಂಬೈಗೆ ಬರುತ್ತಿರುವ ಇತರ ಪ್ರತಿಭಟನಕಾರರನ್ನು ಗಡಿಯಲ್ಲಿ ತಡೆಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದೆ.
ಮರಾಠಾ ಮೀಸಲಾತಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಶೇಷ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಹಾಗೂ ಗೌತಮ್ ಅಂಖಾಡ್ ಅವರನ್ನು ಒಳಗೊಂಡ ಪೀಠ, ಜರಾಂಗೆ ಅವರಿಗೆ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸಲು ಅನುಮತಿ ನೀಡಿಲ್ಲ. ಬದಲು ಒಂದು ದಿನದ ಮಟ್ಟಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಹೇಳಿದೆ.
ಪ್ರತಿಭಟನೆಯಲ್ಲಿ 5 ಸಾವಿರ ಜನರು ಪಾಲ್ಗೊಳ್ಳಲು ಮಾತ್ರ ಅನುಮತಿ ನೀಡಲಾಗಿದೆ. ಆದರೆ, ಜರಾಂಗೆ ಅವರೊಂದಿಗೆ ಪ್ರತಿಭಟನೆ ನಡೆಸಲು ಆಝಾದ್ ಮೈದಾನದಲ್ಲಿ ಹೆಚ್ಚು ಜನರು ಸೇರಿದ್ದಾರೆ ಎಂದು ನ್ಯಾಯಾಲಯ ಗಮನಿಸಿತು. ಈ ಸಮಸ್ಯೆ ಪರಿಹರಿಸಲು ತೆಗೆದುಕೊಂಡ ಕ್ರಮಗಳ ಕುರಿತು ಮಹಾರಾಷ್ಟ್ರ ಸರಕಾರದ ಪ್ರತಿಕ್ರಿಯೆಯನ್ನು ನ್ಯಾಯಾಲಯ ಕೇಳಿತು ಹಾಗೂ ವಿಚಾರಣೆಯನ್ನು ಮಂಗಳವಾರ ಅಪರಾಹ್ನ 3 ಗಂಟೆಗೆ ನಡೆಸಲಾಗುವುದು ಎಂದು ತಿಳಿಸಿತು.
ಇತರ ಹಿಂದುಳಿದ ವರ್ಗಗಳ ಅಡಿಯಲ್ಲಿ ಮರಾಠರಿಗೆ ಶೇ. 10 ಮೀಸಲಾತಿ ಕೋರಿ ಮನೋಜ್ ಜರಾಂಗೆ ಆಗಸ್ಟ್ 29ರಿಂದ ದಕ್ಷಿಣ ಮುಂಬೈಯ ಆಝಾದ್ ಮೈದಾನದಲ್ಲಿ ಉಪವಾಸ ಮುಷ್ಕರ ನಡೆಸುತ್ತಿದ್ದಾರೆ.