ಅಂಗವಿಕಲರ ಟಾರ್ಗೆಟ್ ಮಾಡಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುಪ್ರೀಂ ಕೋರ್ಟ್ ನಿಂದ ಕ್ಷಮೆಯಾಚನೆ ಆದೇಶ

ನವದೆಹಲಿ: ಅಂಗವಿಕಲರನ್ನು ಗುರಿಯಾಗಿಸಿಕೊಂಡು ತಮಾಷೆ ಮಾಡುತ್ತಿರುವ ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಂತಹ ಕೀಳು ಮಟ್ಟದಲ್ಲಿ ತಮಾಷೆ ಮಾಡಿದ ಹಾಸ್ಯನಟರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಅಂಗವಿಕಲರ ಹಕ್ಕುಗಳ ಗುಂಪು ಎಸ್‌ಎಂಎ ಕ್ಯೂರ್ ಫೌಂಡೇಶನ್ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಹಾಸ್ಯನಟರಾದ ಸಮಯ್ ರೈನಾ, ವಿಪುನ್ ಗೋಯಲ್, ಬಲರಾಜ್ ಪರಮಜೀತ್ ಸಿಂಗ್ ಘಾಯ್, ಸೋನಾಲಿ ಥಕ್ಕರ್ ಮತ್ತು ನಿಶಾಂತ್ ಜಗದೀಶ್ ತನ್ವರ್ ಅವರಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ನೀವು ನ್ಯಾಯಾಲಯದ ಮುಂದೆ ಕ್ಷಮೆಯಾಚಿಸಿದ್ದೀರಿ, ನಿಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿಯೂ ಅದೇ ರೀತಿ ಕ್ಷಮೆಯಾಚಿಸಬೇಕು ಎಂದು ತಿಳಿಸಿದೆ. ದಂಡ ವಿಧಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದಿದೆ.
ಹಾಸ್ಯ ಎನ್ನುವುದು ಜೀವನದ ಅತ್ಯಗತ್ಯ ಭಾಗವಾಗಿದ್ದರೂ, ಇತರರೊಂದಿಗೆ ನಗುವುದು ಮತ್ತು ಇತರರನ್ನು ನೋಡಿ ನಗುವುದರ ನಡುವೆ ವ್ಯತ್ಯಾಸವಿದೆ ಎಂದು ಪೀಠ ತಿಳಿಸಿದೆ
