ಕೊಟ್ಟ ಮಾತಿನಂತೆ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮುಂದಾದರೆ ಕಿಚ್ಚ ಸುದೀಪ್?

ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ನಟ ಸುದೀಪ್ ಪ್ರತಿಕ್ರಿಯಿಸಿ ಈ ವಿಚಾರದಲ್ಲಿ ಅಭಿಮಾನಿಗಳ ಪರ ನಿಲ್ಲುತ್ತೇನೆ. ಆ ಭೂಮಿ ಖರೀದಿಗೆ ಹಣಕಾಸು ನೆರವಿಗೂ ಸಿದ್ಧ ಎಂದಿದ್ದರು.

ಹೇಳಿದಂತೆಯೇ ಇದೀಗ ಸುದೀಪ್ ಜಾಗ ಖರೀದಿಸಿದ್ದಾರೆ.
ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಕಿಚ್ಚ ಸುದೀಪ್. ಈ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ದಾದಾ ಸಮಾಧಿ ಧ್ವಂಸ ವಿಚಾರ ತಿಳಿದು ಭಾವುಕರಾಗಿದ್ದರು. “ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ, ಅವರ ಮನ ಒಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ” ಎಂದು ಸುದೀಪ್ ಟ್ವೀಟ್ ಮಾಡಿದ್ದರು. ಆದರೆ ಈಗ ಕೆಂಗೇರಿ ಬಳಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕಿಚ್ಚ ಭೂಮಿ ಖರೀದಿಸಿದ್ದಾರೆ.
ನಟ ಕಿಚ್ಚ ಸುದೀಪ್ ಅಭಿಮಾನ್ ಸ್ಟುಡಿಯೋದಿಂದ ಕೊಂಚ ದೂರದಲ್ಲೇ ಇರುವ ಕೆಂಗೇರಿ ಬಳಿ ಅರ್ಧ ಎಕರೆ ಜಾಗ ಖರೀದಿಸಿದ್ದಾರೆ. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದಾಗಿ ಮಾಹಿತಿ ಲಭ್ಯವಾಗುತ್ತಿದೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಹಾಗೂ ಸುದೀಪ್ ಆಪ್ತ ವೀರಕಪುತ್ರ ಶ್ರೀನಿವಾಸ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಕೆಂಗೇರಿ ಬಳಿ ನಿರ್ಮಾಣ ಆಗುವ ಸ್ಮಾರಕ, ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ, ಅದೇ ರೀತಿ ಮೈಸೂರಿನಲ್ಲಿ ಸರ್ಕಾರ ನಿರ್ಮಿಸಿರುವ ಸ್ಮಾರಕಕ್ಕೆ ಪರ್ಯಾಯ ಕೂಡ ಅಲ್ಲ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ. ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬದ ದಿನವೇ ಹೊಸ ಸ್ಮಾರಕದ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತೇವೆ. ಆ ಸ್ಮಾರಕದಲ್ಲಿ ಏನೆಲ್ಲಾ ಇರಲಿದೆ ಎನ್ನುವ ರೂಪುರೇಷೆ ಕೂಡ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿ ಇಲ್ಲ ಎನ್ನುವ ಬೇಸರದ ನಡುವೆ ಇದೀಗ ಕೆಂಗೇರಿಯಲ್ಲಿ ಸುದೀಪ್ ನೇತೃತ್ವದಲ್ಲಿ ಸ್ಮಾರಕ ನಿರ್ಮಾಣ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿ ಜಾಗವನ್ನು ಬಿಡುವ ಮಾತೇಯಿಲ್ಲ. ಅದಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ. ಮತ್ತೊಂದು ಕಡೆ ದೂರದ ಊರುಗಳಿಂದ ವಿಷ್ಣು ಹುಟ್ಟುಹಬ್ಬ ಆಚರಣೆಗೆ ಬರುವ ಅಭಿಮಾನಿಗಳು ಎಲ್ಲಿಗೆ ಹೋಗಬೇಕು. ಬೆಂಗಳೂರಿನಿಂದ ಮತ್ತೆ ಮೈಸೂರಿಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಕೆಂಗೇರಿ ಬಳಿ ಸ್ಮಾರಕ ನಿರ್ಮಾಣ ಮಾಡುತ್ತಿದ್ದೇವೆ. ನಾವೇ ಮಾಡುವುದರಿಂದ ಇನ್ನೊಂದು ವರ್ಷದಲ್ಲಿ ಅಲ್ಲಿ ಸ್ಮಾರಕ ನಿರ್ಮಾಣವಾಗುತ್ತದೆ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
2009ರಲ್ಲಿ ವಿಷ್ಣುವರ್ಧನ್ ನಿಧನರಾಗಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪಷ್ಟ ಮಾಡಲಾಗಿತ್ತು. ಅಲ್ಲೇ ಸಮಾಧಿ ನಿರ್ಮಿಸಿ ಸಣ್ಣ ಗೋಪುರ ನಿರ್ಮಿಸಲಾಗಿತ್ತು. ಅಲ್ಲೇ ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನಿಸಲಾಗಿತ್ತು. ಆದರೆ ಅದು ಸಾಧ್ಯವಾಗದೇ ಇದ್ದಾಗ ವಿಷ್ಣು ಕುಟುಂಬಸ್ಥರ ಆಸೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಯಿತು. ಆದರೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕವಾಗಬೇಕು ಎಂದು ಬಯಸಿದ್ದರು.
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸಮಾಧಿ ಜಾಗ ವಿವಾದದ ಕೇಂದ್ರ ಬಿಂದುವಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಅಲ್ಲಿ ಸ್ಮಾರಕ ನಿರ್ಮಿಸುವ ಅಭಿಮಾನಿಗಳ ಕನಸು ಈಡೇರಲೇ ಇಲ್ಲ. ಇತ್ತೀಚೆಗೆ ದಿಢೀರನೆ ಬಾಲಕೃಷ್ಣ ಕುಟುಂಬದವರು ದಾದಾ ಸಮಾಧಿಯನ್ನು ಧ್ವಂಸ ಮಾಡಿದ್ದರು. ಆದರೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಅಲ್ಲೇ ಸಮಾಧಿ ನಿರ್ಮಾಣ ಆಗಬೇಕು ಎಂದು ಪಟ್ಟು ಹಿಡಿದಿದ್ದರು.