ಬಂಟ್ವಾಳದ ವಿಟ್ಲ ಅರಮನೆ: 1200 ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಅವಿಭಕ್ತ ಕುಟುಂಬದ ಪ್ರತೀಕ

ಐಶ್ವರ್ಯಭರಿತವಾದ ಸಂಸ್ಕೃತಿಯುಳ್ಳ ನಾಡು ಭಾರತ. ನಮ್ಮ ದೇಶದ ಇತಿಹಾಸದಲ್ಲಿ ಕಣ್ಣು ಹಾಯಿಸಿದಷ್ಟೂ ರಾಜ ಮನೆತನಗಳು ಕಾಣಸಿಗುತ್ತದೆ. ಅಂತಹದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯಲ್ಲಿನ ‘ಡೊಂಬ ಹೆಗ್ಗಡೆ’ ರಾಜಮನೆತನವು ಒಂದು. ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಈ ರಾಜಮನೆತನ ವಿಟ್ಲ ಅರಮನೆ ವಾಸಿಸುತ್ತಿದ್ದಾರೆ.

ವಿಟ್ಲ ಅರಮನೆಯು 300 ವರ್ಷಗಳಿಗಿಂತಲೂ ಹಳೆಯದಾದ ಹುಬ್ಬೇರಿಸುವಂತೆ ಮಾಡುವ ಮನೆ ಎಂದರೆ ವಿಟ್ಲ ಅರಮನೆ. ಅಂದಿನಿಂದ ಇಂದಿನವರೆಗೂ ಯಾವುದೇ ಪ್ರಾಕೃತಿಕ ವಿಕೋಪಕ್ಕೆ ತಲೆಬಾಗದೆ ಪ್ರಕೃತಿಯ ಹಚ್ಚಹಸುರಿನಿಂದ ಇನ್ನಷ್ಟು ಸುಂದರತೆಯಿಂದ ಕಾಣುವ ಈ ಅರಮನೆಯು ವಿಟ್ಲದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ. ಅರಮನೆಯು ಯಾವ ರೀತಿ ಎನ್ನುವುದನ್ನು ಓದುಗರ ಮನಸ್ಸಿಗೆ ತರುವುದು ಬಹಳ ಕಷ್ಟ ಆದರೂ ವಿವರಿಸುವುದು ಬರಹಗಾರನ ಕರ್ತವ್ಯ ಚೌಕಕಾರದ ಮನೆಯ ನಡುವೆ ತುಳಸಿ ಕಟ್ಟೆ, ಸುತ್ತಲೂ ಮರದ ಕಂಬ, ಮನೆಯ ಮುಂಭಾಗದ ಕಪ್ಪು ಬಣ್ಣದ ಕಲ್ಲಿನ ಕಂಬ ಯಾರನ್ನಾದರೂ ತನ್ನಡೆಗೆ ಸೆಳೆಯುತ್ತದೆ. ಅರಮನೆಯ ಮುಂಭಾಗದಲ್ಲ ನೋಡಿದಾಗ ಅತ್ತ ಇತ್ತ ಎರಡು ಸುಂದರವಾದ ಕಲಾಕೃತಿಯನ್ನು ಹೊಂದಿದಂತಹ ಕಿಟಕಿ. ಅರಮನೆಯ ಗೋಡೆಯಂತೂ ಬೆಲ್ಲ, ಮೊಟ್ಟೆ,ಸುಣ್ಣ ಇವನ್ನೆಲ್ಲ ಬಳಸಿ ನಿರ್ಮಾಣ ಮಾಡಿದ ಮನೆಯಾಗಿದೆ. ಮನೆಯ ಮುಂಭಾಗವನ್ನು ಗಮನಿಸಿದಾಗ ಆನೆ ಬಾಗಿಲು ಕಾಣಸಿಗುತ್ತದೆ.
ವಿಶೇಷ ಎನ್ನುವಂತೆ ವಿಭಕ್ತ ಕುಟುಂಬಗಳತ್ತ ಸಾಗುತ್ತಿರುವ ಪ್ರಸ್ತುತ ಸಮಾಜ ಈ ಮನೆಯಲ್ಲಿ ನೋಡಿ ಕಲಿಯುವುದು ತುಂಬಾನೇ ಇದೆ. ಇಂದಿಗೂ ಸಹ ಈ ಮನೆಯಲ್ಲಿ 30ಕ್ಕಿಂತ ಹೆಚ್ಚು ಮಂದಿ ವಾಸವಿರುವುದು ಅಚ್ಚರಿಯ ಸಂಗತಿ. ವಿಶೇಷ ಸಂದರ್ಭಗಳಲ್ಲಿ 60 ಮಂದಿ ಒಟ್ಟುಗೂಡಿ ಚೌತಿ, ದೀಪಾವಳಿ, ನವರಾತ್ರಿ ಹಬ್ಬಗಳನ್ನ ಬಹಳ ಸಂತೋಷದಿಂದ ಆಚರಿಸುತ್ತಾರೆ.
ಚೌತಿಯ ದಿನದಂದು ವಿಟ್ಲ ಅರಮನೆಯ ಸದಸ್ಯರೇ ಸೇರಿ ಗಣಪತಿ ಮೂರ್ತಿಯನ್ನು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ವಿಟ್ಲ ಅರಮನೆಗೆ ತರುವುದು ಹಲವು ವರ್ಷಗಳಿಂದ ನಡೆಯುತ್ತಿರುವ ಚೌತಿ ಆಚರಣೆಯ ವಿಧ. ಚೌತಿಯ ದಿನ ಮಧ್ಯಾಹ್ನ ಭೋಜನದ ಸಮಯದಲ್ಲಿ 50 ಕ್ಕಿಂತಲೂ ಹೆಚ್ಚು ಮನೆ ಮಂದಿ ಒಟ್ಟಿಗೆ ಬಾಳೆ ಎಲೆಯಲ್ಲಿ ಊಟ ಮಾಡುವಂತಹ ಪದ್ಧತಿಯು ಇಂದಿಗೂ ಜೀವಂತವಾಗಿದೆ. ದೀಪಾವಳಿಯನ್ನು ಮನೆಯ ಮಂದಿ ಎಲ್ಲ ಸೇರಿ ತುಳಸಿ ಕಟ್ಟೆಗೆ ಮಾವಿನ ಎಲೆಗಳಿಂದ ಅಲಂಕಾರಗೊಳಿಸಿ ದೀಪವನ್ನು ಭಕ್ತಿ ಭಾವದಿಂದ ಉರಿಸಿ ದೀಪಾವಳಿ ಆಚರಿಸುತ್ತಿರುವುದು ನಮಗೆಲ್ಲ ಮಾದರಿಯಂತಿದೆ.
ನವರಾತ್ರಿ ಸಮಯದಲ್ಲಿ 9 ದಿವಸವು ದೇವಿಗೆ ವಿಶೇಷ ದುರ್ಗಾ ಪೂಜೆ ವಿಟ್ಲ ಅರಮನೆಯಲ್ಲಿ ನಡೆಯುವುದು ಇನ್ನಷ್ಟು ವಿಶೇಷ. ವಿಟ್ಲ ಅರಮನೆಯಲ್ಲಿ ಒಟ್ಟು 30 ಕ್ಕಿಂತ ಹೆಚ್ಚು ಮಂದಿ ಮತ್ತು 20 ಕೊಠಡಿಗಳಿದ್ದು ಅವಿಭಕ್ತವಾಗಿ ವಾಸಮಾಡುವ ಇಂದಿಗೂ ಜೀವಂತವಾಗಿರುವ ಮನೆ ಎಂದರೆ ತಪ್ಪಾಗದು. ಸಾಮಾನ್ಯ ದಿನಗಳಲ್ಲಿ ಅಡುಗೆಗಳು ಬೇರೆ ಬೇರೆಯಾದರೂ ವಿಶೇಷ ಸಂದರ್ಭದಲ್ಲಿ ಅಂತೂ ಒಟ್ಟಿಗೆ ಕೂತು ಏಕತೆಯ ಭಾವದಿಂದ ಊಟ ಸವಿಯುವುದು ಇಲ್ಲಿಯ ಸಾಮಾನ್ಯವಾಗಿ ಗಮನಿಸುವಂತಹ ವಿಭಿನ್ನ ವಿಷಯವಾಗಿದೆ.
ವಿಟ್ಲ ಅರಮನೆಯ ಇನ್ನೊಂದು ವಿಶೇಷತೆ ಎಂದರೆ 25 ವರ್ಷಗಳ ಹಿಂದೆ 9 ವಿಟ್ಲ ಅರಮನೆಯ ಜೋಡಿಗೆ ಏಕಕಾಲದಲ್ಲಿ ಮದುವೆಯಾದ ಇತಿಹಾಸ ಈ ಮನೆಗಿದೆ. ಅರಮನೆಯಲ್ಲೊಂದು ಅಚ್ಚರಿ ಕಲ್ಲು ವಿಟ್ಲ ಅರಮನೆಯಲ್ಲಿರುವ ಒಂದು ಕಲ್ಲು ತುಂಬಾ ವಿಶೇಷವಾದುದ್ದು. ಸಾಕಷ್ಟು ಇತಿಹಾಸವನ್ನು ಕಂಡಿರುವ ಈ ಕಲ್ಲನ್ನು ನಿರ್ಮಿಸಿದ್ದು ಯಾರು ಅನ್ನೋದರ ಬಗ್ಗೆ ಯಾರಿಗೂ ತಿಳಿಯದಿದ್ದರೂ ಕಲ್ಲು ಹಿಂದೊಮ್ಮೆ ಪೈಲ್ವಾನ್‌ಗಳ ಶಕ್ತಿ ಪ್ರದರ್ಶನಕ್ಕೆ ಮಾರ್ಗವಾಗಿತ್ತು ಅನ್ನೋದು ನಿಜ. ಈ ಕಲ್ಲಿನ ಮೇಲೆ ತುಳು ಲಿಪಿ ಇದ್ದು ಇದನ್ನು ಶಕ್ತಿ ಕಲ್ಲು ಎಂದೂ ಕರೆಯಲಾಗುತ್ತದೆ. ಸೌರಮಾನ ಯುಗಾದಿಯಂದು ಊರಿನವರ ಸಮ್ಮುಖದಲ್ಲಿ ಕಲ್ಲನ್ನು ಎತ್ತಿ ಶಕ್ತಿ ಪ್ರದರ್ಶನ ನಡೆಯುತ್ತಿತ್ತು ಎಂಬುದು ಐತಿಹ್ಯ. ಕ್ರಮೇಣ ಇದು ಶಕ್ತಿ ಕಲ್ಲು ಎಂದು ಹೆಸರು ಪಡೆಯಿತಂತೆ. ಅನಂತರ ನವರಾತ್ರಿಯ ಸಮಯದಲ್ಲಿ ನಗರ ಭಜನೆ ದಿವಸದಂದು ಕಲ್ಲಿನ ಮೇಲ್ಬಾಗಕ್ಕೆ ಸಂಪೂರ್ಣ ಎಣ್ಣೆ ತುಂಬಿ, ಅದರ ಸುತ್ತಲೂ ಭಜನೆ ಮಾಡುತ್ತ, ಕುಣಿಯುತ್ತ ಬರಲಾಗಿದೆ.
ಇಂದಿಗೂ ಇದೆ ಅಂದಿನ ಪಲ್ಲಕ್ಕಿ
ಅರಮನೆಯ ರಾಜರ ದೇವಸ್ಥಾನ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಲು ಬಳಸುತ್ತಿದ್ದ ಪಲ್ಲಕ್ಕಿ ವಿಟ್ಲ ಅರಮನೆಯಲ್ಲಿದ್ದು ಇದನ್ನು ಆರು ಮಂದಿ ಹೊರುತ್ತಿದ್ದರು ಹಾಗೂ ಅವರಿಗೆ ಜೀವನ ಸಾಗಿಸಲು ಇಂತಿಷ್ಟು ಭೂಮಿಯನ್ನು ಕೊಟ್ಟಿದ್ದರು. ಇಂದಿಗೂ ಆಕರ್ಷಣೆ ತನ್ನ ಕಡೆಗೆ ಸೆಳೆಯುವಂತ ಶಕ್ತಿ ಈ ಪಲ್ಲಕ್ಕಿಗಿದೆ. ಪ್ರಾಣಿಗಳಿಗೆ ಜೀವ ನೀಡುವ ನೀರಿನ ತೊಟ್ಟಿ ಹಿಂದಿನ ಕಾಲಘಟ್ಟದಲ್ಲಿ ಸೈನ್ಯಕ್ಕೆ ಬಳಸುತ್ತಿದ್ದ ಕುದುರೆಗಳಿಗೆ ನೀರು ಕುಡಿಯಲೆಂದು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿರುತ್ತಿದ್ದರು. ಅನಂತರದ ದಿನಗಳಲ್ಲಿ ದನಗಳಿಗೂ ಸಹ ನೀರನ್ನು ಇದೆ ತೊಟ್ಟಿಯಲ್ಲಿ ನೀಡಲಾಗುತ್ತಿತ್ತು.
ಇಂತಹ ಹಿನ್ನೆಲೆ ಇರುವಂತಹ ನೀರಿನ ತೊಟ್ಟಿಯನ್ನು ಇಂದಿಗೂ ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ವಿಟ್ಲ ಅರಮನೆ ಅಂತಹ ಮನೆಗಳು ಇನ್ನೂ ಸಹ ನಮ್ಮ ಮಧ್ಯ ಇವೆ. ಅದನ್ನು ಗುರುತಿಸಿ ಅದರ ಮಹತ್ವವನ್ನ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಇಂತಹ ಮನೆಯನ್ನ ಉಳಿಸಿ ಬೆಳೆಸುವುದರಲ್ಲಿ ಯುವ ಜನಾಂಗದ ಮಹತ್ವ ಹೆಚ್ಚಿದೆ