ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕದಿಂದ ಭಾರತದ ಮೇಲೆ ಪರಮಾಣು ಬೆದರಿಕೆ

ವಾಷಿಂಗ್ಟನ್: ಭಾರತದ ಮೇಲೆ ಅಮೆರಿಕ ದುಪ್ಪಟ್ಟು ಆಮದು ಸುಂಕ ವಿಧಿಸಿರುವ ಬೆನ್ನಲ್ಲೇ ಅಮೆರಿಕಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ( Asim Munir) ಭಾರತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕದ ನೆಲದಿಂದ “ಪರಮಾಣು ಯುದ್ಧ”ದ ಬಗ್ಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದೊಂದಿಗಿನ ಮುಂದಿನ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಸ್ತಿತ್ವದ ಬೆದರಿಕೆ ಎದುರಾದರೆ ನಾವು ಅರ್ಧ ಜಗತ್ತನ್ನೇ ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
“ಪಾಕಿಸ್ತಾನ ಪರಮಾಣು ರಾಷ್ಟ್ರ. ನಾವು ಪತನಗೊಳ್ಳುತ್ತಿದ್ದೇವೆ ಎಂದು ಯಾರಾದರೂ ಭಾವಿಸಿದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸಿಯೇ ನಾವು ಪತನವಾಗುತ್ತೇವೆ ಎಂಬುದನ್ನು ನೆನಪಿಡಿ” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಮೂರನೇ ದೇಶದ ವಿರುದ್ಧ ಅಮೆರಿಕ ನೆಲದಿಂದ ಬಂದಿರುವ ಮೊದಲ ಪರಮಾಣು ಬೆದರಿಕೆಯಾಗಿದೆ.

ಸಿಂಧೂ ಜಲ ಒಪ್ಪಂದದ ಕುರಿತು ಅಸಿಮ್ ಮುನೀರ್ ಟೀಕೆ:
ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭಾರತವು ಸಿಂಧೂ ಜಲ ಮಾರ್ಗಗಳಲ್ಲಿ ನಿರ್ಮಿಸುವ ಯಾವುದೇ ಮೂಲಸೌಕರ್ಯವನ್ನು ನಾಶಪಡಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ. ನಮ್ಮ ದೇಶದಲ್ಲಿ ಕ್ಷಿಪಣಿಗಳ ಕೊರತೆಯಿಲ್ಲ. ಸಿಂಧೂ ಜಲ ಮಾರ್ಗದಲ್ಲಿ ಭಾರತ ಅಣೆಕಟ್ಟು ನಿರ್ಮಿಸಿದರೆ ಅದು ಪಾಕಿಸ್ತಾನಕ್ಕೆ ನೀರಿನ ಹರಿವನ್ನು ತಡೆಯಬಹುದು. ಹಾಗೇನಾದರೂ ಡ್ಯಾಂ ನಿರ್ಮಿಸಿದರೆ ನಾವು ಬಾಂಬ್ ಸಿಡಿಸುತ್ತೇವೆ ಎಂದು ಅವರು ಬೆದರಿಕೆ ಹಾಕಿದ್ದಾರೆ. ಏಪ್ರಿಲ್ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರದಿಂದ 250 ಮಿಲಿಯನ್ ಜನರು ಹಸಿವಿನಿಂದ ಬಳಲುವ ಅಪಾಯ ತಂದೊಡ್ಡಿದೆ ಎಂದು ಮುನೀರ್ ಹೇಳಿದ್ದಾರೆ.
“ಭಾರತವು ಸಿಂಧೂ ನದಿಗೆ ಅಣೆಕಟ್ಟು ನಿರ್ಮಿಸುವವರೆಗೆ ನಾವು ಕಾಯುತ್ತೇವೆ. ಡ್ಯಾಂ ಪೂರ್ಣವಾದ ನಂತರ ನಾವು ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ಅದು ನಮಗೂ ಸೇರಿದ್ದು. ಅಲ್ಲಾಹ್ ನಮ್ಮೊಂದಿಗಿದ್ದಾನೆ” ಎಂದು ಅಸೀಮ್ ಮುನೀರ್ ಹೇಳಿದ್ದಾರೆ.