ಎಟಿಎಂನಿಂದ ಹಣ ಬಂದಿಲ್ಲ ಎಂದು ವಾಪಾಸ್ ಹೋಗಬೇಡಿ-ಕಳ್ಳರ ಹೊಸ ತಂತ್ರ ಬಯಲು

ಚಿಕ್ಕಬಳ್ಳಾಪುರ :ಎಟಿಎಂನಿಂದ ಹಣ ಬಾರದಿದ್ದರೆ ಹಾಗೆಯೇ ಸುಮ್ಮನೆ ವಾಪಾಸಗಬೇಡಿ, ಯಾರೋ ಕಳ್ಳರು ನಿಮ್ಮ ಹಣಕ್ಕೆ ಕನ್ನ ಹಾಕಿರಬಹುದು. ಹೌದು, ಚಿಕ್ಕಬಳ್ಳಾಪುರ ದಲ್ಲಿ ಎಟಿಎಂ ಯಂತ್ರಕ್ಕೆ ವಿಶೇಷ ಸಾಧನ ಅಳವಡಿಸಿ, ಗ್ರಾಹಕರು ಡ್ರಾ ಮಾಡಿದ ಹಣವನ್ನು ದೋಚುತ್ತಿದ್ದ ಚಾಲಾಕಿ ಕಳ್ಳನನ್ನು ಬಂಧಿಸಲಾಗಿದೆ.

ಹಾಗಿದ್ದರೆ ಏನಿದು ಹೊಸ ಮಾದರಿಯ ಕಳ್ಳತನ?
ಹೌದು, ಇದು ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ. ಏಪ್ರಿಲ್ 11 ರ ರಾತ್ರಿ, ಇಲ್ಲಿ ಒಂದು ರೀತಿಯ ಕಳ್ಳತನ ನಡೆದಿದೆ. ಕಳ್ಳರು ಎಟಿಎಂನಿಂದ ಹಣ ಹೊರಬರುವ ಜಾಗಕ್ಕೆ ಒಂದು ಸಾಧನವನ್ನು ಅಳವಡಿಸಿದ್ದಾರೆ. ಗ್ರಾಹಕರು ಹಣ ಡ್ರಾ ಮಾಡಿದಾಗ, ನೋಟುಗಳು ಹೊರಬರುವ ಬದಲು ಆ ಸಾಧನದೊಳಗೆ ಸಿಲುಕಿಕೊಳ್ಳುತ್ತಿದ್ದವು. ಹಣ ಬರಲಿಲ್ಲವೆಂದು ತಿಳಿದು ಗ್ರಾಹಕರು ಅಲ್ಲಿಂದ ಹೊರಟುಹೋದ ನಂತರ, ಕಳ್ಳರು ಎಟಿಎಂಗೆ ಬಂದು ಸಾಧನದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಂದಾಜು 2 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು.
ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣದ ದೂರಿನ ಅನ್ವಯ, ವಿಶೇಷ ತಂಡ ರಚಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು. ಈ ತನಿಖೆ ವೇಳೆ ಆರೋಪಿಯು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಯಿತು. ಆರೋಪಿಯ ಜಾಡುಹಿಡಿದು ಬೆಂಗಳೂರಿಗೆ ತೆರಳಿದ ಚಿಕ್ಕ ಬಳ್ಳಾಪುರ ಪೊಲೀಸರು ತ್ರಿಪುರಾ ಮೂಲದ ನಿಯಾಜ್ ಉದ್ದೀನ್ ಎಂಬ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಈತ ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ.
ಒಟ್ಟಿನಲ್ಲಿ, ಹೊಸ ತಂತ್ರ ಬಳಸಿ ಎಟಿಎಂ ದೋಚುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಈ ಘಟನೆ ಎಟಿಎಂ ಬಳಸುವ ಸಾರ್ವಜನಿಕರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಎಟಿಎಂ ಬಳಸುವಾಗ ಹಣ ಬರದಿದ್ದರೆ, ತಕ್ಷಣವೇ ಬ್ಯಾಂಕಿನ ಸಹಾಯವಾಣಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಗತ್ಯ.
