KRIDL ನೌಕರನ ಭ್ರಷ್ಟಾಚಾರ ಬಯಲು; 24 ಮನೆ, ಬೇನಾಮಿ ಆಸ್ತಿಯ ಅಗರ್ಭ ಶ್ರೀಮಂತ

ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (KRIDL) ಹೊರಗುತ್ತಿದೆ ಆಧಾರದಲ್ಲಿ ದಿನಗೂಲಿ ನೌಕರನಾಗಿದ್ದ ಕಳಕಪ್ಪ ನಿಡುಗುಂದಿ ಇಂದು ಆಗರ್ಭ ಶ್ರೀಮಂತ! ಈತನ ಒಡೆತನದಲ್ಲಿ ಕೊಪ್ಪಳ (Koappal) ಹಾಗೂ ಭಾಗ್ಯ ನಗರದಲ್ಲಿ 24 ಮನೆಗಳಿವೆ. ತಮ್ಮನ, ಹೆಂಡತಿಯ ತಮ್ಮನ ಹೆಸರಿನಲ್ಲಿಯೂ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾತನ ಬಂಡವಾಳವನ್ನು ಇದೀಗ ಲೋಕಾಯಕ್ತ ಅಧಿಕಾರಿಗಳು ಬಯಲು ಮಾಡಿದ್ದಾರೆ. ಭ್ರಷ್ಟಾಚಾರದಿಂದ ಅಪಾರ ಸಂಪತ್ತು ಕೂಡಿಹಾಕಿದಾತ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ಕಳಕಪ್ಪ ನಿಡುಗುಂದಿ ವಿರುದ್ಧ ಕೆಆರ್ಐಡಿಎಲ್ ಅಧಿಕಾರಿಗಳೇ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಗುರುವಾರ ಬೆಳಗ್ಗೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಆತನ ಸಂಪತ್ತು ಕಂಡು ಶಾಕ್ ಆಗಿದ್ದಾರೆ.

ಕಳಕಪ್ಪ ನಿಡುಗುಂದಿ ಕೊಪ್ಪಳ ನಗರದ ವಿವಿಧ ಕಡೆ 24 ಮನೆಗಳು, ಆರು ಪ್ಲಾಟ್ ಹೊಂದಿರುವುದು ಲೋಕಾಯುಕ್ತ ದಾಳಿಯಿಂದ ತಿಳಿದುಬಂದಿದೆ. ಇಷ್ಟೆ ಅಲ್ಲದೆ, ತಮ್ಮನ ಹಾಗೂ ಪತ್ನಿಯ ತಮ್ಮನ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿರುವುದೂ ಗೊತ್ತಾಗಿದೆ.
ಕೆಆರ್ಐಡಿಎಲ್ ಹಗರಣದ ಪ್ರಮುಖ ಸೂತ್ರಧಾರಿ ಕಳಕಪ್ಪ ಬಂಡಿ
ಮನೆಗಳು, ಫ್ಲಾಟ್ ಮಾತ್ರವಲ್ಲದೆ ಕಳಕಪ್ಪ ನಿಡುಗುಂದಿ ಮನೆಯಿಂದ ಚಿನ್ನಾಭಾರಣಗಳನ್ನೂ ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿಹಾಳ ನಿವಾಸಿಯಾಗಿರುವ ಕಳಕಪ್ಪ ನಿಡಗುಂದಿ ಸುಮಾರು 20 ವರ್ಷಗಳ ಕಾಲ ಕೆಆರ್ಐಡಿಎಲ್ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿದ್ದ. 15,000 ರೂ. ವೇತನಕ್ಕೆ ದುಡಿಯುತ್ತಿದ್ದ ಎನ್ನಲಾಗಿದೆ.
72 ಕೋಟಿ ರೂ. ಅಕ್ರಮ ವಿಚಾರವಾಗಿ ದೂರು
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಸುಮಾರು 72 ಕೋಟಿ ರೂ. ಅಕ್ರಮ ಎಸಗಲಾಗಿದೆ ಎಂಬ ವಿಚಾರವಾಗಿ ಅಧಿಕಾರಿಗಳು ಕಳೆದ ವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಚರಂಡಿ ಕಾಮಗಾರಿ, ಕುಡಿಯುವ ನೀರು ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳದಲ್ಲಿ ಅಕ್ರಮದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೊಪ್ಪಳ ಕೆಆರ್ಐಡಿಎಲ್ ಇಇ ಆಗಿದ್ದ ಝಡ್ಎಂ ಚಿಂಚೋಳಿಕರ ಹಾಗೂ ಹೊರಗುತ್ತಿಗೆ ನೌಕರ ಕಳಕಪ್ಪ ನೀಡಗುಂದಿ ವಿರುದ್ದ ದೂರು ದಾಖಲಾಗಿತ್ತು. ಈ ದೂರಿನ ಆಧಾರದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದಿದ್ದರು. ಆ ನಂತರ ಇಬ್ಬರ ವಿರುದ್ಧ ಅಧಿಕಾರಿಗಳೇ ದೂರು ನೀಡಿದ್ದರು. ಅದರ ಆಧಾರದಲ್ಲಿ ದಾಳಿ ನಡೆಸಿದಾಗ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ.
