ಭಾರತದಿಂದ ಪರಾರಿಯಾದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ‘ಆರ್ಥಿಕ ಅಪರಾಧಿ’ ಎಂದು ಘೋಷಣೆ

ನವದೆಹಲಿ: ಬ್ರಿಟನ್ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿಯನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ. ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ದೆಹಲಿ ವಿಶೇಷ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.


ಸಂಜಯ್ ಭಂಡಾರಿ, ಬ್ರಿಟನ್ನಲ್ಲಿ ನೆಲೆಸಿರುವ ಶಸ್ತ್ರಾಸ್ತ್ರ ಸಲಹೆಗಾರ 2016ರಲ್ಲಿ ಭಾರತದಿಂದ ಬ್ರಿಟನ್ಗೆ ಪರಾರಿಯಾದವರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. 2015ರ ಕಪ್ಪುಹಣ ತಡೆ ಕಾಯ್ದೆಯಡಿ ಆದಾಯ ತೆರಿಗೆ ಇಲಾಖೆ ದಾಖಲಿಸಿದ ಆರೋಪಪಟ್ಟಿಯನ್ನು ಆಧರಿಸಿ, ಇಡಿಯು 2017ರ ಫೆಬ್ರವರಿಯಲ್ಲಿ ಭಂಡಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತು. 2020ರಲ್ಲಿ ಇಡಿ ಆರೋಪಪಟ್ಟಿಯನ್ನು ಸಹ ಸಲ್ಲಿಸಿತು.
ಇಡಿಯ ಪ್ರಕಾರ, ಭಂಡಾರಿಯು 100 ಕೋಟಿ ರೂ.ಗಿಂತಲೂ ಹೆಚ್ಚಿನ ಮೌಲ್ಯದ ವಿದೇಶಿ ಆಸ್ತಿಗಳನ್ನು ಹೊಂದಿದ್ದಾನೆ. ಇವುಗಳನ್ನು ಆದಾಯ ತೆರಿಗೆ ಇಲಾಖೆಗೆ ಬಹಿರಂಗಪಡಿಸದೇ ಅಕ್ರಮವಾಗಿ ಸಂಪಾದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಭಂಡಾರಿಯು ಭಾರತದ ಕಾನೂನು ಪ್ರಕ್ರಿಯೆಯಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿದ್ದಾನೆ ಎಂದು ಇಡಿ ವಾದಿಸಿತ್ತು.

ಭಾರತ ಸರ್ಕಾರವು ಭಂಡಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಬ್ರಿಟನ್ಗೆ ಮನವಿ ಸಲ್ಲಿಸಿತ್ತು. ಆದರೆ, ಅಲ್ಲಿಯ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿತು. ಇದರ ಬೆನ್ನಲೆ ದೆಹಲಿ ವಿಶೇಷ ನ್ಯಾಯಲಯ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದು, ಭಂಡಾರಿಯ ಆಸ್ತಿಗಳನ್ನು ಮುಟ್ಟುಗೋಲಿಗೆ ಒಳಪಡಿಸಲು ಮತ್ತು ಕಾನೂನು ಕ್ರಮಕ್ಕೆ ಒಳಪಡಿಸಲು ಭಾರತ ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ.