ಹಳೆಯ ಸೇತುವೆ ಕುಸಿದು 20ಕ್ಕೂ ಹೆಚ್ಚು ಮಂದಿ ನಾಪತ್ತೆ

ಪುಣೆ:ತಾಲೂಕಿನ ಕುಂಡ್ ಮಾಲಾ ಎಂಬಲ್ಲಿ ಸೇತುವೆ ದಿಢೀರ್ ಕುಸಿದ ಪರಿಣಾಮ ಆರು ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಕೊಚ್ಚಿಹೋಗಿದ್ದಾರೆ ಎಂದು ವರದಿಯಾಗಿದೆ.
ಕುಂಡ್ ಮಾಲಾದಲ್ಲಿ ಇಂದ್ರಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಹಳೆಯ ಸೇತುವೆ ಕುಸಿದು ಹಲವಾರು ಪ್ರವಾಸಿಗರು ನದಿಗೆ ಬಿದ್ದಿದ್ದಾರಂತೆ. ವಿಶೇಷವಾಗಿ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಜನದಟ್ಟಣೆಯಿಂದಾಗಿ, ಸೇತುವೆ ಮೇಲೆ ಭಾರಿ ಜನಸಂದಣಿ ಇತ್ತು. ಆಗ ಸೇತುವೆ ಕುಸಿದಿದ್ದು, ಹಲವಾರು ಜನರು ಮುಳುಗಿರುವ ಸಾಧ್ಯತೆಯಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಕಳೆದ ಎರಡು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದ್ರಾಣಿ ನದಿಯ ನೀರಿನ ಮಟ್ಟ ಮತ್ತು ಹರಿವನ್ನು ಹೆಚ್ಚಿಸಿದೆ, ಆ ಕಾರಣಕ್ಕೆ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗಿದೆ.
ಕುಸಿದ ಸೇತುವೆ ಹಲವು ದಶಕಗಳಷ್ಟು ಹಳೆಯದಾಗಿದೆ. ಕುಂಡ್ ಮಾಲಾ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ಯಾತ್ರಿಕರಿಗೆ ಪಾದಚಾರಿ ಮಾರ್ಗವಾಗಿ ಬಳಕೆಯಾಗುತ್ತಿತ್ತು.