Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಟಾಯ್ಲೆಟ್ ತೊಳೆಯಲಿ ವಿದ್ಯಾರ್ಥಿಗಳು!” – ಐಎಎಸ್ ಅಧಿಕಾರಿ ಹೇಳಿಕೆಗೆ ನಿಂದನೆಯ ಅಲೆ

Spread the love

ತೆಲಂಗಾಣ: ‘ವಸತಿಗೃಹದಲ್ಲಿರುವ ವಿದ್ಯಾರ್ಥಿಗಳು ಶೌಚಾಲಯ ಸ್ವಚ್ಛಗೊಳಿಸುವುದು ಮತ್ತು ಕೊಠಡಿಗಳನ್ನು ತಾವೇ ಗುಡಿಸಬೇಕುʼ ಎಂದು ತೆಲಂಗಾಣ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ವಿ.ಎಸ್. ಅಲಗು ವರ್ಷಿಣಿ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿದೆ.

ಇದು ತೆಲಂಗಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಐಎಎಸ್‌ ಅಧಿಕಾರಿ ಆಗಿರುವ ವರ್ಷಿಣಿ ಅವರು ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ತೆಲಂಗಾಣದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದ್ದು, ವರದಿ ಕೇಳಿದೆ.

ಐಎಎಸ್ ಅಧಿಕಾರಿ ವಿ.ಎಸ್. ಅಲಗು ವರ್ಷಿಣಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕೊಂದು ವೈರಲ್ ಆಗುತ್ತಿದ್ದಂತೆ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ (NCSC) ತಕ್ಷಣ ಕಾರ್ಯಪ್ರವೃತ್ತವಾಗಿದೆ. ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು 15 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಕೇಳಿದೆ. ಅಧಿಕಾರಿ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ಏನಿದು ಘಟನೆ?

ತೆಲಂಗಾಣದ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ರೊಟ್ಟಿ ತಯಾರಿಸುವುದು, ಗುಡಿಸುವುದು, ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ನೀಡಲಾಗಿತ್ತು. ‘ಅವರು (ವಿದ್ಯಾರ್ಥಿಗಳು) ರೂಂ ಕ್ಲೀನಿಂಗ್ ಮಾಡಬೇಕು. ಒಂದು ಬಾರಿ ಸ್ವೀಪರ್ ಮಾಡಿದ್ರೆ, ನಂತರದಲ್ಲಿ ಸ್ಟೂಡೆಂಟ್ಸ್ ಯಾಕೆ ಮಾಡಬಾರದು? ಅದೇ ತರ, ಅವರ ಟಾಯ್ಲೆಟ್ಸ್ ಅವರೇ ಯಾಕೆ ಕ್ಲೀನ್ ಮಾಡಬಾರದು? ಅದ್ರಲ್ಲಿ ತಪ್ಪೇನಿದೆ?ʼ ಎಂದು ಐಎಎಸ್‌ ಅಧಿಕಾರಿ ವರ್ಷಿಣಿ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳಿಗೆ ‘ಶ್ರಮದಾನ’ದ ಬಗ್ಗೆ ಕಲಿಸಬೇಕು. ಸ್ವಚ್ಛತೆಯ ಭಾಗವಾಗಿ ಇದನ್ನು ಮಾಡಬೇಕು. ಇದಕ್ಕೆ ಪೋಷಕರು ಆಕ್ಷೇಪಿಸಿದರೆ, ಅವರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ವರ್ಷಿಣಿ ಎಚ್ಚರಿಕೆ ನೀಡಿದ್ದಾರೆ. ಅವರ ಮಾತುಗಳನ್ನು ಯಾರೋ ರೆಕಾರ್ಡ್ ಮಾಡಿ, ನಂತರ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದ್ದಾರೆ.

NCSC ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣವೇ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವರ್ಷಿಣಿ ಅವರ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದರೆ, ಆಡಿಯೋದಲ್ಲಿರುವ ಧ್ವನಿ ಅವರದ್ದೇ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ, ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ.

ತೆಲಂಗಾಣ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ಕಾರ್ಯದರ್ಶಿ ಆಗಿರುವ ವರ್ಷಿಣಿ ಅವರು, ವಾರದ ಹಿಂದೆ ಅಧಿಕಾರಿಗಳು, ಶಾಲಾ ಪ್ರಾಂಶುಪಾಲರಿಗೆ ವಸತಿ ನಿಲಯಗಳು ಮತ್ತು ತರಗತಿ ಕೊಠಡಿಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ವಿದ್ಯಾರ್ಥಿಗಳ ದಿನಚರಿಯಲ್ಲಿ ಸೇರಿಸಲು ನಿರ್ದೇಶನ ನೀಡಿದ್ದರು. ವಸತಿಗೃಹ ಶಾಲೆಗಳ ವಿದ್ಯಾರ್ಥಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಮತ್ತು ತಮ್ಮ ಕೊಠಡಿಗಳನ್ನು ತಾವೇ ಸ್ವಚ್ಛಗೊಳಿಸುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ತೆಲಂಗಾಣದಲ್ಲಿ ಹೆಚ್ಚಾಯ್ತು ವಿರೋಧ!

ಭಾರತ್ ರಾಷ್ಟ್ರ ಸಮಿತಿ (BRS) ನಾಯಕ ಮತ್ತು ಡಾ.ಆರ್.ಎಸ್.ಪ್ರವೀಣ್ ಕುಮಾರ್ ಈ ಬಗ್ಗೆ ಪ್ರಶ್ನೆ ಎತ್ತಿದ್ದು, ಮುಖ್ಯಮಂತ್ರಿಯವರ ಮಕ್ಕಳು ಓದುತ್ತಿರುವ ಶಾಲೆಯ ಸ್ನಾನಗೃಹಗಳನ್ನು ತೊಳೆಯುತ್ತಾರೆಯೇ ಎಂದಿದ್ದಾರೆ. ಅಲ್ಲದೆ ಅಧಿಕಾರಿ ವರ್ಷಿಣಿ, ದಲಿತ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಆಕೆಯನ್ನು ಕೆಲಸದಿಂದ ವಜಾ ಮಾಡುವಂತೆ ಒತ್ತಾಯಿಸಿದ್ದಾರೆ. ‘ಐಎಎಸ್ ಅಧಿಕಾರಿ ಡಾ. ಅಲಗು ವರ್ಷಿಣಿ ಅವರ ಈ ಆದೇಶಗಳು ಆಘಾತಕಾರಿ ಮತ್ತು ಅನೇಕ ಅಧಿಕಾರಿಗಳ ಮನುವಾದಿ ಮನಸ್ಥಿತಿಯನ್ನು ತೋರಿಸುತ್ತವೆ. ಅವರು ಈ ‘ಸುಧಾರಣಾ’ ಆದೇಶಗಳನ್ನು ಪ್ರಶ್ನಿಸುವ ಪೋಷಕರಿಗೆ ಬೆದರಿಕೆ ಹಾಕುತ್ತಿದ್ದಾರೆʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ವಿಷಯವನ್ನು ರಾಜಕೀಯಗೊಳಿಸಬೇಡಿ!

ಆಡಿಯೊದಲ್ಲಿ, ಅಧಿಕಾರಿ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದು, ‘ಈ ವಿದ್ಯಾರ್ಥಿಗಳು ಅತ್ಯಂತ ಬಡ ಕುಟುಂಬಗಳಿಂದ ಬಂದವರು ಮತ್ತು ಮನೆಯಲ್ಲಿರುವಾಗಲೂ ತಮ್ಮನ್ನು ಹೇಗೆ ನೋಡಿಕೊಳ್ಳಬೇಕೆಂದು ಕಲಿಯಬೇಕು. ಅವರು ರೊಟ್ಟಿ ತಯಾರಿಸಬೇಕಾದರೆ, ರೊಟ್ಟಿ ತಯಾರಿಸುತ್ತಾರೆ. ಅದು ಒಳ್ಳೆಯದು. ಅವರು ಕೊಠಡಿಗಳನ್ನು ಸ್ವಚ್ಛಗೊಳಿಸಬೇಕು. ಇದು ಮಗುವಿನ ಬೆಳವಣಿಗೆಯ ಹಂತ. ನಾವು ಐಷಾರಾಮಿ ನೀಡಲು ಸಾಧ್ಯವಿಲ್ಲ. 11 ಮತ್ತು 12 ನೇ ತರಗತಿಗಳ ನಂತರ ಮಕ್ಕಳನ್ನು ನೋಡಿಕೊಳ್ಳಲು ಪೋಷಕರು ಇರುವುದಿಲ್ಲ. ಅಡುಗೆ ಮಾಡುವುದು ಹೇಗೆಂದು ನನಗೆ ತಿಳಿದಿಲ್ಲ ಮತ್ತು ನನಗೆ ಓದುವುದು ಮಾತ್ರ ಗೊತ್ತು ಎಂದು ಹೇಳುವುದು ಸ್ವೀಕಾರಾರ್ಹವಲ್ಲʼ ಎಂದು ಅಧಿಕಾರಿ ವರ್ಷಿಣಿ ಹೇಳಿರುವುದು ಆಡಿಯೊದಲ್ಲಿ ಕೇಳಿಸುತ್ತದೆ.

ಮತ್ತೊಂದು ಆಡಿಯೊದಲ್ಲಿ, ವಿದ್ಯಾರ್ಥಿಗಳನ್ನು ಒಳಗೊಂಡ ವಿಷಯವನ್ನು ರಾಜಕೀಯಗೊಳಿಸದಂತೆ ಮತ್ತು ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ನೈರ್ಮಲ್ಯ ಸಿಬ್ಬಂದಿಯ ಕೊರತೆಯ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿರುವ ಅವರು, ಮಕ್ಕಳು ಮನೆಯಲ್ಲಿ ಪೋಷಕರಿಗೆ ಸಹಾಯ ಮಾಡುವುದು ‘ಸಾಮಾನ್ಯ ದಿನನಿತ್ಯದ ಚಟುವಟಿಕೆʼ ಮತ್ತು ‘ಅರಿವುಳ್ಳ ವ್ಯಕ್ತಿʼಯಾಗಿ ಬೆಳೆಯಲು ಸಹಾಯ ಮಾಡುತ್ತದೆ. ನೀವು ವಿದೇಶಕ್ಕೆ ಹೋದರೆ ಅಥವಾ ಇನ್ನೊಂದು ರಾಜ್ಯಕ್ಕೆ ಹೋದರೆ, ನಿಮ್ಮ ದಿನನಿತ್ಯದ ಕೆಲಸವನ್ನು ನೀವೇ ಮಾಡಿಕೊಳ್ಳಬೇಕಾಗುತ್ತದೆ. ಹೀಗಿರುವಾಗ ಎಲ್ಲ ಕೆಲಸಗಳ ಬಗ್ಗೆಯೂ ತಿಳಿದಿರಬೇಕುʼ ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *