ಸೋನು ಸೂದ್ ಟ್ರಾಫಿಕ್ ನಿಯಮ ಉಲ್ಲಂಘನೆ: ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ವಿಡಿಯೋ ವೈರಲ್, ಪೊಲೀಸರಿಂದ ಎಚ್ಚರಿಕೆ

ನಟ ಸೋನು ಸೂದ್ ಅವರನ್ನು ಅನೇಕರು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಸೋನು ಸೂದ್ ಅವರ ಸಮಾಜಮುಖಿ ಕಾರ್ಯಗಳೇ ಅದಕ್ಕೆ ಕಾರಣ. ಆದರೆ ಕೆಲವೊಮ್ಮೆ ಸೋನು ಸೂದ್ ಅವರು ಕೂಡ ತಪ್ಪು ಮಾಡುವುದುಂಟು. ಈಗ ಅವರ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸೋನು ಸೂದ್ ಅವರು ಯಾವುದೇ ಸುರಕ್ಷತಾ ಕ್ರಮಗಳು ಇಲ್ಲದೇ ಬೈಕ್ ಓಡಿಸಿದ್ದಾರೆ. ಅವರು ಹೆಲ್ಮೆಟ್ ಕೂಡ ಧರಿಸಿಲ್ಲ. ಅದಕ್ಕಾಗಿ ಅವರ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಕೆ ವ್ಯಕ್ತವಾದ ಬಳಿಕ ಸೋನು ಸೂದ್ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಸೋನು ಸೂದ್ ಅವರು ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಗೆ ತೆರಳಿದ್ದಾರೆ. ಅಲ್ಲಿ ಅವರು ಜಾಲಿಯಾಗಿ ಬೈಕ್ ರೈಡ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದನ್ನು ನೋಡಿದ ನೆಟ್ಟಿಗರು ಚಾಟಿ ಬೀಸಿದ್ದಾರೆ. ಶರ್ಟ್, ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ್ದು ಜನರಿಗೆ ಸರಿ ಎನಿಸಿಲ್ಲ. ‘ಸೆಲೆಬ್ರಿಟಿಯಾಗಿ ನೀವೇ ಈ ರೀತಿ ಮಾಡುತ್ತೀರಲ್ಲ’ ಎಂದು ಜನರು ಬುದ್ಧಿ ಹೇಳಿದ್ದಾರೆ.
‘ಸ್ಪಿತಿಯಲ್ಲಿ ಹೆಲ್ಮೆಟ್ ಧರಿಸಿದೇ ಬೈಕ್ ಓಡಿಸಿದ್ದಕ್ಕಾಗಿ ಸೋನು ಸೂದ್ ವಿರುದ್ಧ ಹಿಮಾಚಲ ಪ್ರದೇಶದ ಪೊಲೀಸರು ಕ್ರಮ ತೆಗೆದುಕೊಳ್ಳುವುದಿಲ್ಲವೇ? ಬಟ್ಟೆ ಇಲ್ಲದೇ, ಸುರಕ್ಷತಾ ಕ್ರಮಗಳು ಇಲ್ಲದೇ ಇವರು ಏನನ್ನು ಪ್ರಚಾರ ಮಾಡುತ್ತಿದ್ದಾರೆ? ಸೆಲೆಬ್ರಿಟಿಗಳು ಎಂದರೆ ಕಾನೂನನ್ನೂ ಮೀರಿದವರಾ?’ ಎಂದು ನೆಟ್ಟಿಗರೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
‘ಈ ಕೆಟ್ಟ ಟ್ರೆಂಡ್ ಹೆಚ್ಚಾಗುತ್ತಿದೆ. ಸುಲಭವಾಗಿ ತಲುಪಲು ಸಾಧ್ಯವಿಲ್ಲದ ಈ ಸ್ಥಳಗಳು ಚೆನ್ನಾಗಿದ್ದವು. ಈಗ ಎಲ್ಲ ಮೂರ್ಖರು ಇಂಥ ಅಪಾಯಕಾರಿ ರಸ್ತೆಯಲ್ಲಿ ತಮ್ಮ ಬುದ್ಧಿ ತೋರಿಸುತ್ತಾರೆ. ಇಂಥವರನ್ನು ಬ್ಯಾನ್ ಮಾಡಬೇಕು’ ಎಂಬ ಕಮೆಂಟ್ ಕೂಡ ಬಂದಿದೆ. ಜನರಿಗೆ ಮಾದರಿ ಆಗಿರುವ ಸೋನು ಸೂದ್ ಅವರೇ ಈ ರೀತಿ ನಡೆದುಕೊಂಡಿದ್ದಕ್ಕೆ ಜನರು ಕೋಪಗೊಂಡಿದ್ದಾರೆ.
ವೈರಲ್ ವಿಡಿಯೋಗೆ ಸ್ಪಿತಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ‘ಬಾಲಿವುಡ್ ನಟ ಸೋನು ಸೂದ್ ಅವರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಈ ವಿಡಿಯೋ 2023ರದ್ದು. ಆದರೂ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ಸೂಚಿಸಲಾಗಿದೆ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ