ಪರೇಶ್ ರಾವಲ್ ಇಲ್ಲದ ಹೇರಾಫೇರಿ? ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಆಕ್ರೋಶ

ಕೆಲವು ಚಿತ್ರಗಳ ಪಾತ್ರಗಳಲ್ಲಿ ಸಮ್ಮೋಹಕ ಶಕ್ತಿ ಇರುತ್ತೆ. ಆ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಕೊಂಡಿರುತ್ತವೆ. ಹೃದಯವನ್ನು ಗೆದ್ದಿರುತ್ತವೆ. ವರ್ಷಾನು ವರ್ಷಗಳಾದರೂ ಕೂಡಾ ಆ ಪಾತ್ರಗಳನ್ನು ಜನ ಮರೆಯುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಅದೇ ಪಾತ್ರದಲ್ಲಿ ಅದೇ ಕಲಾವಿದರನ್ನು ನೋಡಲು ಜನ ಬಯಸುತ್ತಾರೆ.

ಚಿತ್ರದ ಮುಂದುವರೆದ ಭಾಗಗಳನ್ನು ಮಾಡಿ ಎನ್ನುವ ಒತ್ತಾಯವನ್ನು ಮಾಡುತ್ತಾರೆ. ಉದಾಹರಣೆಗೆ ಹೇರಾ ಫೇರಿ ಚಿತ್ರದ ರಾಜು-ಶ್ಯಾಮ್ ಮತ್ತು ಬಾಬು ಭಯ್ಯಾ ಪಾತ್ರಗಳು.
ಹೌದು. ಹೇರಾ ಫೇರಿ ಚಿತ್ರ ತೆರೆಗೆ ಬಂದು 25 ವರ್ಷಗಳಾಗಿವೆ. ಆದರೆ ಇವತ್ತು ಕೂಡಾ ಅಕ್ಷಯ್ ಕುಮಾರ್.. ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ನಿರ್ವಹಿಸಿರುವ ಈ ಪಾತ್ರಗಳನ್ನು ಚಿತ್ರ ರಸಿಕರು ಮರೆತಿಲ್ಲ. ಇವತ್ತು ಕೂಡಾ ಈ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾದಾಗ ಅಥವಾ ಓಟಿಟಿಯಲ್ಲಿ ನೋಡಿದಾಗ ಅನೇಕ ಪ್ರೇಕ್ಷಕರು ಉಳ್ಳಾಡಿ ನಗುತ್ತಾರೆ.
ಹೇರಾ ಫೇರಿಗೆ ಹೋಲಿಸಿದರೆ 2006ರಲ್ಲಿ ತೆರೆಗೆ ಬಂದ ಫಿರ್ ಹೇರಾ ಪೇರಿಯ ಕಥೆ ಪೇಲವವಾಗಿತ್ತು. ಆದರೂ ಕೂಡ ಆ ಚಿತ್ರದ ಗೆಲುವಿನ ಹಿಂದೆ ಇದೇ ಪಾತ್ರಗಳ ಮ್ಯಾಜಿಕ್ ಇತ್ತು. ಆದರೆ ಈಗ ಈ ಮ್ಯಾಜಿಕ್ ಮಾಯವಾಗಿದೆ. ಯಾಕೆಂದರೆ ತ್ರಿವಳಿ ಜೋಡಿ ಬೇರ್ಪಟ್ಟಿದೆ.
ಹೌದು ಅಸಲಿಗೆ ಭಾರೀ ಜನಾಭಿಪ್ರಾಯದ ಮೇರೆಗೆ ಈ ವರ್ಷದ ಜನವರಿಯಲ್ಲಿ ನಿರ್ದೇಶಕ ಪ್ರಿಯದರ್ಶನ್ ಹೇರಾಫೇರಿ ಚಿತ್ರದ ಮೂರನೇ ಭಾಗವನ್ನು ಘೋಷಿಸಿದ್ದರು. ಅಕ್ಷಯ್ ಕುಮಾರ್ . ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಈ ಚಿತ್ರದಲ್ಲಿ ಕೂಡ ಮುಂದುವರೆಯಲಿದ್ದಾರೆ ಎಂದು ಹೇಳಿದ್ದರು.
ಹೇರಾಫೇರಿ ಫ್ರಾಂಚೈಸಿಯ ಅಭಿಮಾನಿಗಳು ಸಹಜವಾಗಿ ಈ ಸುದ್ದಿಯನ್ನು ಕೇಳಿ ಸಂಭ್ರಮಿಸಿದ್ದರು. ಯಾಕೆಂದರೆ ನಾವು ಆಗಲೇ ಹೇಳಿದಂತೆ ಕೆಲವು ಪಾತ್ರಗಳು ಪಾತ್ರಗಳಾಗಿರುವುದಿಲ್ಲ. ಬದಲಿಗೆ ಜನರ ಹೃದಯಕ್ಕೆ ಹತ್ತಿರವಾಗಿರುತ್ತಾವೆ. ಹೀಗಾಗಿ ಆದಷ್ಟು ಬೇಗ ಈ ಚಿತ್ರದ ಚಿತ್ರೀಕರಣ ಮುಗಿಸಿ ಬಿಡುಗಡೆಯನ್ನು ಮಾಡಿ ಎಂದು ಮನವಿಯನ್ನು ಹಲವಾರು ಜನ ಸೋಶಿಯಲ್ ಮೀಡಿಯಾ ಮೂಲಕ ಮಾಡಿದ್ದರು.
ಆದರೆ ಈಗ ನೋಡಿದರೆ ಪರೇಶ್ ರಾವಲ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಚಿತ್ರದ ಚಿತ್ರೀಕರಣ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ ಚಿತ್ರತಂಡದಿಂದ ಹೊರ ಬಂದಿದ್ದಾರೆ. ಪರೇಶ್ ರಾವಲ್ ಅವರ ಈ ನಡೆಯಿಂದ ಸದ್ಯ ಹಲವಾರು ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
ಈ ಕುರಿತು ಬಾಲಿವುಡ್ ಹಂಗಾಮಾಗೆ ಪ್ರತಿಕ್ರಿಯೆಯನ್ನು ಕೂಡ ನೀಡಿರುವ ಪರೇಶ್ ರಾವಲ್, ಹೌದು ನಾನು ಚಿತ್ರದಿಂದ ಹೊರ ಬಂದಿರುವುದು ಸತ್ಯ ಎಂದು ಹೇಳಿದ್ದಾರೆ. ಆದರೆ ಕಾರಣವನ್ನು ಹೇಳಿಲ್ಲ. ಇದೇ ಚಿತ್ರತಂಡದ ಸದಸ್ಯರೊಬ್ಬರು ಬಾಲಿವುಡ್ ಹಂಗಾಮಾಗೆ ಹೇಳಿರುವಂತೆ ಕಥೆ ವಿಚಾರದಲ್ಲಿ ನಿರ್ದೇಶಕ ಪ್ರಿಯದರ್ಶನ್ ಮತ್ತು ಪರೇಶ್ ರಾವಲ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಈ ಹಿನ್ನೆಲೆ ಹಿಂದೆ ಸರಿಯುವುದೇ ಉತ್ತಮ ಎನ್ನುವ ತೀರ್ಮಾನಕ್ಕೆ ಪರೇಶ್ ರಾವಲ್ ಬಂದಿದ್ದಾರೆ.
ಪರೇಶ್ ರಾವಲ್ ಅವರ ಈ ನಿರ್ಧಾರದಿಂದ ಸಹಜವಾಗಿ ಬೇಸರಗೊಂಡಿರುವ ಹೇರಾ ಫೇರಿ ಅಭಿಮಾನಿಗಳು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಚಿತ್ರದಲ್ಲಿ ಪರೇಶ್ ರಾವಲ್ ಇರದಿದ್ದರೆ ಚಿತ್ರವನ್ನು ಮಾಡಲೇಬೇಡಿ ಎನ್ನುತ್ತಿದ್ದಾರೆ. ದುಡ್ಡಿಗಾಗಿ ಸುಮ್ಮನೆ ಚಿತ್ರವನ್ನು ಮಾಡಿ ಹೇರಾ ಫೇರಿ ಹೆಸರಿಗೆ ಕಳಂಕ ತರಬೇಡಿ ಎಂದು ಹೇಳುತ್ತಿದ್ದಾರೆ. ಪರೇಶ್ ರಾವಲ್ ಇರದ ಹೇರಾ ಫೇರಿಯನ್ನು ಊಹಿಸಿಕೊಳ್ಳಲು ಕೂಡ ಸಾಧ್ಯ ಇಲ್ಲ ಹೇಗಾದರೂ ಮಾಡಿ ಅವರ ಮನವೊಲಿಸಿ ಮರಳಿ ಕರೆದುಕೊಂಡು ಬನ್ನಿ ಎನ್ನುವ ಮನವಿಯನ್ನು ಕೂಡ ಅನೇಕರು ಮಾಡುತ್ತಿದ್ದಾರೆ.