ವರ್ಕ್ ಫ್ರಮ್ ಹೋಮ್ ಆಮಿಷ: ಶಿಕ್ಷಕಿ ₹8.87 ಲಕ್ಷ ಕಳೆದುಕೊಂಡ ಪ್ರಕರಣ

ತುಮಕೂರು: ವರ್ಕ್ ಫ್ರಮ್ ಹೋಮ್ ಆಮಿಷಕ್ಕೆ ಒಳಗಾಗಿ ನಗರದ ವಿನೋಬ ನಗರದ ಶಿಕ್ಷಕಿ ಜೈನಬ್-ಬಿ ಎಂಬುವರು ₹8.87 ಲಕ್ಷ ಕಳೆದುಕೊಂಡಿದ್ದಾರೆ.
ಫೇಸ್‌ಬುಕ್ ಬಳಸುತ್ತಿದ್ದಾಗ ವರ್ಕ್ ಫ್ರಮ್ ಹೋಮ್ ಕುರಿತ ಜಾಹೀರಾತು ಕ್ಲಿಕ್ ಮಾಡಿದ್ದಾರೆ. ನಂತರ ಅವರಿಗೆ ಟೆಲಿಗ್ರಾಮ್ ಮೂಲಕ ಅಪರಿಚಿತರು ಮೆಸೇಜ್ ಮಾಡಿದ್ದಾರೆ.

ಮನೆಯಲ್ಲಿಯೇ ಕೆಲಸ ಮಾಡಿ ಹೆಚ್ಚಿನ ಹಣ ಗಳಿಸಬಹುದು ಎಂದು ಹೇಳಿದ್ದಾರೆ. ಒಂದು ಟಾಸ್ಕ್‌ಗೆ ₹10 ಸಾವಿರ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಹಣ ವರ್ಗಾಯಿಸಿದ ನಂತರ ಲಾಭಾಂಶ ಎಂದು ₹7,271 ಹಣ ಜೈನಬ್-ಬಿ ಖಾತೆಗೆ ಮರಳಿದ್ದಾರೆ.
ಇದನ್ನು ನಂಬಿದ ಶಿಕ್ಷಕಿ ವಿವಿಧ ಬ್ಯಾಂಕ್ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಹಂತ ಹಂತವಾಗಿ ಒಟ್ಟು ₹8,87,543 ವರ್ಗಾಯಿಸಿದ್ದಾರೆ. ಅವರಿಗೆ ಯಾವುದೇ ಹಣ ವಾಪಸ್ ನೀಡಿಲ್ಲ. ಹಣ ವಾಪಸ್ ಕೇಳಿದಾಗ ಅಪರಿಚಿತರು ಟೆಲಿಗ್ರಾಮ್ ಖಾತೆ ಡಿಲೀಟ್ ಮಾಡಿದ್ದಾರೆ. ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ದಾರಿ ತೋಚದಂತಾದ ಶಿಕ್ಷಕಿ ಸೈಬರ್ ಠಾಣೆ ಮೆಟ್ಟಿಲು ಹತ್ತಿದ್ದು, ಪ್ರಕರಣ ದಾಖಲಾಗಿದೆ